ಚಂಡೀಗಡ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹಾಗೂ ಹರಿಯಾಣ ಗಡಿ ಪ್ರದೇಶಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೀಗ ಆಡಳಿತರೂಢ ಬಿಜೆಪಿ ಪಕ್ಷದ ಮುಖಂಡರಿಂದಲೇ ಬೆಂಬಲ ಸಿಗಲು ಪ್ರಾರಂಭವಾಗಿದೆ.
ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಬಿರೇಂದರ್ ಸಿಂಗ್ ಬೆಂಬಲ ಸೂಚಿಸಿದ್ದಾರೆ.
ಬಿರೇಂದರ್ ಸಿಂಗ್, ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಹಿತಾಸಕ್ತಿಗಾಗಿ ಹೋರಾಟ ನಡೆಸಿರುವ ಪ್ರಮುಖ ರಾಜಕಾರಣಿ ಸರ್. ಛೋಟು ರಾಮ್ ಅವರ ಮೊಮ್ಮಗರಾಗಿದ್ದಾರೆ. ಬಿರೇಂದರ್ ಸಿಂಗ್ ಪುತ್ರ, ಬ್ರಿಜೇಂದ್ರ ಕೂಡಾ ಬಿಜೆಪಿ ಸಂಸದರಾಗಿದ್ದಾರೆ.
ರೈತರ ಹೋರಾಟದೊಂದಿಗೆ ನಿಲ್ಲುವುದು ನನ್ನ ನೈತಿಕ ಜವಾಬ್ದಾರಿಯಾಗಿದೆ. ಹೊಸ ಕೃಷಿ ಕಾಯ್ದೆಗಳು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಬಗ್ಗೆ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದವರು ಹೇಳಿದರು.
ನಾನು ರಾಜಕಾರಣದಲ್ಲಿ ಏನೇ ಸಾಧನೆ ಮಾಡಿದರೂ ಸರ್ ಛೋಟು ರಾಮ್ ಅವರ ಮೊಮ್ಮಗನಾಗಿರದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ, ಇಂದು ರೈತರ ಹೋರಾಟದಲ್ಲಿ ಅವರೊಂದಿಗೆ ನಿಲ್ಲುವುದು ನನ್ನ ನೈತಿಕ ಹೊಣೆಯಾಗಿದ್ದು, ಆದ್ದರಿಂದ ರೈತರ ಹೋರಾಟವನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ದೆಹಲಿಯ ಗಡಿಯಲ್ಲಿರುವ ಹರಿಯಾಣದ ಜಿಲ್ಲೆಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಶೀಘ್ರದಲ್ಲೇ ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ಬಿರೇಂದರ್ ಘೋಷಿಸಿದರು.
'ಚೌಧರಿ ಛೋಟು ರಾಮ್ ವಿಚಾರ್ ಮಂಚ್' ಅವರ ಬ್ಯಾನರ್ ಅಡಿಯಲ್ಲಿ ಕೇಂದ್ರದ ಮಾಜಿ ಸಚಿವರು ಮತ್ತವರ ಬೆಂಬಲಿಗರು ರೋಹ್ಟಕ್‌ನಲ್ಲಿ ಪ್ರತಿಭಟನೆಯಲ್ಲಿ ಕುಳಿತಿದ್ದರು.
ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬೀಡು ಬಿಟ್ಟಿರುವ ರೈತರು ಪ್ರತಿಭಟನೆಯಲ್ಲಿ ನಿರತವಾಗಿದ್ದಾರೆ.
ಬಿರೇಂದರ್ ಸಿಂಗ್ 2020 ಜನವರಿ ತಿಂಗಳಲ್ಲಿ ರಾಜ್ಯ ಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.