ನವದೆಹಲಿ: ಕಳೆದ 20 ದಿನಗಳಿಂದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿದೆ.
ದೆಹಲಿ ಹಾಗೂ ಹರಿಯಾಣ ಗಡಿ ಪ್ರದೇಶಗಳಲ್ಲಿ ರೈತರು ಭಾರಿ ಅಂದೋಲನ ನಡೆಸುತ್ತಿದ್ದಾರೆ. ಚಳಿಗಾಲ ಆರಂಭವಾಗಿರುವಂತೆಯೇ ದೆಹಲಿಯಲ್ಲಿ ತೀವ್ರ ಚಳಿ ಅನುಭವಾಗುತ್ತಿದೆ. ಟಿಕ್ರಿ ಹಾಗೂ ಸಿಂಘು ಗಡಿಗಳಲ್ಲಿ ವಿಪರೀತ ಚಳಿಯನ್ನು ಲೆಕ್ಕಿಸದೇ ಪ್ರತಿಭಟಿಸುತ್ತಿರುವ ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಯು ತಿಳಿಸಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಕೃಷಿ ಕ್ಷೇತ್ರದ ಸುಧಾರಣಾ ಕಾಯ್ದೆಯನ್ನು ರದ್ದುಗೊಳಿಸುವಂತೆ ಬೇಡಿಕೆಯನ್ನಿರಿಸಿದ್ದಾರೆ. ಇದು ಕಾರ್ಪೋರೇಟ್ ವಲಯಕ್ಕೆ ಪ್ರಯೋಜನವನ್ನು ನೀಡುತ್ತದೆ ಹೊರತು ರೈತರಿಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೈತ್ಯ ಕಾಲದಲ್ಲಿ ವಿಪರೀತ ಚಳಿಯ ನಡುವೆಯೂ ರೈತರ ಪ್ರತಿಭಟನೆಯ ಸ್ವರವನ್ನು ಕೇಂದ್ರ ಸರಕಾರ ಆಲಿಸುತ್ತಿಲ್ಲ. ಇದು ನಿಜಕ್ಕೂ ಆಘಾತಕಾರಿ ವಿಷಯ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅಭಿಪ್ರಾಯಪಟ್ಟರು.
ಮಂಗಳವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.