ಇಂದೋರ್: 11ನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದ ರೈತನ ಮಗಳೊಬ್ಬಳು ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಮ್‌ಪಿಪಿಎಸ್‌ಸಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದು ಇದೀಗ ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿದ್ದಾರೆ.
ಪ್ರಿಯಾಲ್ ಯಾದವ್ ಎಂಬ 27 ವರ್ಷದ ಯುವತಿಯ ಸ್ಫೂರ್ತಿದಾಯಕ ಕಥೆಯಿದು. ‘10ನೇ ತರಗತಿವರೆಗೆ ನಾನು ಟಾಪರ್ ಆಗಿದ್ದೆ. ಸಂಬಂಧಿಗಳ ಒತ್ತಡದಿಂದಾಗಿ 11ನೇ ತರಗತಿಗೆ ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಆಯ್ಕೆ ಮಾಡಿಕೊಂಡೆ. ಈ ವಿಷಯದಲ್ಲಿ ನನಗೆ ಆಸಕ್ತಿ ಇರಲಿಲ್ಲ. ಭೌತವಿಜ್ಞಾನದಲ್ಲಿ ನಾನು ಅನುತ್ತೀರ್ಣಳಾದೆ. ನನ್ನ ಶೈಕ್ಷಣಿಕ ಜೀವನದಲ್ಲಿ ಇದೇ ನನ್ನ ಮೊದಲ ಮತ್ತು ಕೊನೆಯ ವೈಫಲ್ಯ. ಚಿಕ್ಕ ವಯಸ್ಸಿನಲ್ಲೇ ಹೆಣ್ಣುಮಕ್ಕಳ ಮದುವೆ ಮಾಡುವ ಗ್ರಾಮೀಣ ಪ್ರದೇಶದಲ್ಲಿ ನಾನು ಬೆಳೆದಿದ್ದೇನೆ. ನನ್ನ ಪೋಷಕರು ನನಗೆ ಎಂದಿಗೂ ಮದುವೆಯ ಒತ್ತಡ ಹೇರದೆ ನನ್ನ ವಿದ್ಯಾಭ್ಯಾಸ ಮುಂದುವರಿಸಲು ಎಲ್ಲಾ ಅನುಕೂಲ ಮಾಡಿಕೊಟ್ಟರು’ ಎನ್ನುತ್ತಾರೆ ಪ್ರಿಯಾಲ್.
ಪ್ರಿಯಾಲ್ ಅವರ ತಂದೆ ರೈತರು. ರಾಜ್ಯದಲ್ಲಿ ಉಪವಿಭಾಗಾಧಿಕಾರಿಯಾಗಿ ಕೆಲಸ ಮುಂದುವರೆಸುತ್ತಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಲು ಮುಂದಾಗಿರುವ ಪ್ರಿಯಾಲ್ ಐಎಎಸ್ (ಭಾರತೀಯ ಆಡಳಿತ ಸೇವೆ) ಆಗಿ ಸೇವೆ ಸಲ್ಲಿಸುವ ಕನಸು ಹೊತ್ತಿದ್ದಾರೆ.
2019ರಲ್ಲಿ ನಡೆದ ಎಮ್‌ಪಿಪಿಎಸ್‌ಸಿ ಪರೀಕ್ಷೆಯಲ್ಲಿ 19ನೇ ರ್‍ಯಾಂಕ್ ಪಡೆದು ಜಿಲ್ಲಾ ನೋಂದಣಾಧಿಕಾರಿಯಾಗಿದ್ದ ಪ್ರಿಯಾಲ್ ಅವರು 2020ರಲ್ಲಿ ಮತ್ತದೇ ಪರೀಕ್ಷೆಯಲ್ಲಿ 34ನೇ ರ್‍ಯಾಂಕ್ ಗಳಿಸಿ ಸಹಾಯಕ ಕಮಿಷನರ್ ಹುದ್ದೆ ಗಿಟ್ಟಿಸಿಕೊಂಡಿದ್ದರು. ಇದೀಗ ಮತ್ತೆ 2021ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ 6ನೇ ರ್‍ಯಾಂಕ್ ಗಳಿಸಿದ್ದಾರೆ. ಗುರುವಾರ ಸಂಜೆ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.