ADVERTISEMENT

ರೈತರ ದೆಹಲಿ ಚಲೋ ಪ್ರತಿಭಟನೆಗೆ ಬೆಂಬಲ: ಬಿಜೆಪಿಯ ನಾಯಕರ ನಿವಾಸದ ಎದುರು ಧರಣಿ

ಪಿಟಿಐ
Published 17 ಫೆಬ್ರುವರಿ 2024, 13:20 IST
Last Updated 17 ಫೆಬ್ರುವರಿ 2024, 13:20 IST
<div class="paragraphs"><p>ಪ್ರತಿಭಟನೆ</p></div>

ಪ್ರತಿಭಟನೆ

   

ಚಂಡೀಗಢ (ಪಿಟಿಐ): ‘ದೆಹಲಿ ಚಲೋ’ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಭಾರತೀಯ ಕಿಸಾನ್‌ ಒಕ್ಕೂಟವು (ಬಿಕೆಯು)  ಬಿಜೆಪಿಯ ಮೂವರು ಹಿರಿಯ ನಾಯಕರ ನಿವಾಸದ ಎದುರು ಶನಿವಾರ ಧರಣಿ ನಡೆಸಿತು. ಬಿಕೆಯು (ಚುರೂಣಿ ಬಣ) ಹರಿಯಾಣದಲ್ಲಿ ಟ್ರ್ಯಾಕ್ಟರ್‌ ಮೆರವಣಿಗೆ ನಡೆಸಿತು. 

ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ಪಂಜಾಬ್‌ ಬಿಜೆಪಿ ಘಟಕದ ಮುಖ್ಯಸ್ಥ ಸುನಿಲ್ ಜಾಖಡ್‌  ಮತ್ತು ಹಿರಿಯ ನಾಯಕ ಕೇವಲ್‌ ಸಿಂಗ್‌ ಧಿಲ್ಲಾನ್ ಅವರ ನಿವಾಸದ ಎದುರು ರೈತರು ಧರಣಿ ನಡೆಸಿದರು. ಜೊತೆಗೆ ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

ಚುರೂಣಿ ಬಣವು ಕುರುಕ್ಷೇತ್ರ, ಯಮುನಾನಗರ, ಸಿರ್ಸಾ ಮುಂತಾದೆಡೆ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿತು. 150 ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಈ ಸಂದರ್ಭದಲ್ಲಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಪ್ರತಿಭಟನೆಯು ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ.  ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತರು, ಪಂಜಾಬ್‌ ಮತ್ತು ಹರಿಯಾಣದ ಗಡಿಗಳಲ್ಲಿಯೇ ಉಳಿದಿದ್ದು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪಂಜಾಬ್‌ನ ರೈತರು ಮಂಗಳವಾರ ದೆಹಲಿಯತ್ತ ಹೊರಟಿದ್ದರು. ಆದರೆ ಶಂಭು ಮತ್ತು ಖನೌರಿ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಹೀಗಾಗಿ ರೈತರು ಗಡಿಯಲ್ಲೇ ಉಳಿದು ಪ್ರತಿಭಟನೆ ಮುಂದುವರಿಸಿದ್ದಾರೆ.

ಕೇಂದ್ರ ಸಚಿವರೊಂದಿಗೆ ಮಾತುಕತೆ:

ಕೇಂದ್ರ ಸಚಿವ ಅರ್ಜುನ್‌ ಮುಂಡಾ, ಪೀಯೂಷ್‌ ಗೋಯಲ್‌ ಮತ್ತು ನಿತ್ಯಾನಂದ ರಾಯ್‌ ಅವರು ಭಾನುವಾರ ರೈತ ನಾಯಕರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಫೆ.8, 12 ಮತ್ತು 15ರಂದು ಉಭಯ ತಂಡಗಳು ನಡೆಸಿದ್ದ ಮಾತುಕತೆ ವಿಫಲವಾಗಿತ್ತು.

‘ಕೇಂದ್ರ ಸುಗ್ರೀವಾಜ್ಞೆ ಹೊರಡಿಸಲಿ’

ಚಂಡೀಗಢ (ಪಿಟಿಐ): ರೈತರು ಬೆಳೆದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ಜಾರಿ ಮಾಡಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ರೈತ ನಾಯಕ ಸರವಣ್‌ ಸಿಂಗ್‌ ಪಂಡೇರ್‌ ಆಗ್ರಹಿಸಿದ್ದಾರೆ. ಶಂಭು ಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕೇಂದ್ರ ಸರ್ಕಾರಕ್ಕೆ ‘ರಾಜಕೀಯ’ ನಿರ್ಧಾರ ಕೈಗೊಳ್ಳುವ ಹಕ್ಕಿದೆ. ಸುಗ್ರೀವಾಜ್ಞೆ ತಂದಲ್ಲಿ  ಎಂಎಸ್‌ಪಿಗೆ ಕಾನೂನಿನ ಖಾತ್ರಿ ದೊರಕಲಿದೆ. ಕೇಂದ್ರವು ರೈತರ ಏಳಿಗೆಯನ್ನು ಬಯಸುವುದಾದರೆ  ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸಲಿ’ ಎಂದು ಹೇಳಿದ್ದಾರೆ. ರೈತರ ಸಾಲಮನ್ನಾ ವಿಚಾರವಾಗಿ ‘ಸರ್ಕಾರ ಬ್ಯಾಂಕ್‌ಗಳಿಂದ ಈ ಕುರಿತ ಅಂಕಿ–ಅಂಶವನ್ನು ಪಡೆದುಕೊಳ್ಳಬಹುದು. ಅಂತಿಮವಾಗಿ ಇದು ರಾಜಕೀಯ ಇಚ್ಛಾಶಕ್ತಿಯ ಪ್ರಶ್ನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.