ಚಂಡೀಗಢ: ರೈತರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಪಂಜಾಬ್‌ನ ಕೆಲವೆಡೆ ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಇದೇ 24ರವರೆಗೆ ವಿಸ್ತರಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪಟಿಯಾಲ, ಸಂಗ್ರೂರ್, ಫತೇಗಢ ಸಾಹಿಬ್ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಫೆಬ್ರುವರಿ 12ರಿಂದ 16ರವರೆಗೆ ಈ ಪ್ರದೇಶಗಳಲ್ಲಿ ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಹರಿಯಾಣ ರಾಜ್ಯದ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲೂ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ಮಂಗಳವಾರ ‘ದೆಹಲಿ ಚಲೋ’ ಪ್ರತಿಭಟನೆಗೆ ಚಾಲನೆ ನೀಡಿದ್ದರು.
ಪ್ರತಿಭಟನಾನಿರತ ರೈತರನ್ನು ಪಂಜಾಬ್ ಮತ್ತು ಹರಿಯಾಣದ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆಗಿನಿಂದಲೂ ರೈತರು ಗಡಿ ಭಾಗದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
–––
‘ಯುಪಿಎ ಸರ್ಕಾರ ರೈತರ ಹಿತ ರಕ್ಷಿಸಿತ್ತು’
ಚಂಡೀಗಢ (ಪಿಟಿಐ): ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಸ್ವಾಮಿನಾಥನ್ ಆಯೋಗದ 201 ಶಿಫಾರಸುಗಳ ಪೈಕಿ 175 ಅನ್ನು ಜಾರಿಗೊಳಿಸಿತ್ತು. ಅಲ್ಲದೆ ರೈತರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕಿ ಕುಮಾರಿ ಸೆಲ್ಜಾ ಭಾನುವಾರ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು 10 ವರ್ಷಗಳಲ್ಲಿ ರೈತರ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಿಲ್ಲ ಎಂದು ಆರೋಪಿಸಿದ ಅವರು, ಯುಪಿಎ ಅವಧಿಯಲ್ಲಿ ₹ 72,000 ಕೋಟಿ ಸಾಲ ಮನ್ನಾ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವರೂ ಆದ ಸೆಲ್ಜಾ ಅವರು, ಬಿಜೆಪಿ ನಾಯಕರು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
–––
ಇದೇ 20ರಿಂದ ಮೂರು ದಿನ ಘೇರಾವ್
ಲೂಧಿಯಾನ (ಪಿಟಿಐ): ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಂಗಳವಾರದಿಂದ ಮೂರು ದಿನಗಳ ಕಾಲ ಪಂಜಾಬ್‌ನ ಬಿಜೆಪಿ ನಾಯಕರ ನಿವಾಸಗಳಿಗೆ ಘೇರಾವ್ ಹಾಕಲಿದೆ ಎಂದು ಮೋರ್ಚಾದ ಮುಖಂಡರು ತಿಳಿಸಿದ್ದಾರೆ.
–––
ರೈತರ ಬೇಡಿಕೆಗಳ ಈಡೇರಿಸಲು ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡಬಾರದು. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ನೀಡಬೇಕು
– ಜಗಜಿತ್ ಸಿಂಗ್ ದಲ್ಲೆವಾಲ್, ರೈತ ಮುಖಂಡ
–––
ರೈತರ ಪ್ರತಿಭಟನೆಗೆ ನಾನು ಸಲಾಂ ಮಾಡುತ್ತೇನೆ. ಅವರ ಮೇಲಿನ ದಾಳಿಯನ್ನು ಖಂಡಿಸುತ್ತೇನೆ
– ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ, ಪಶ್ಚಿಮ ಬಂಗಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.