ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು, ಕ್ರಮ ಕೈಗೊಂಡಿರುವ ದೆಹಲಿ ಪೊಲೀಸರು 30,000 ಅಶ್ರುವಾಯು ಶೆಲ್ ಖರೀದಿಗೆ ಮುಂದಾಗಿದ್ದಾರೆ.
ಪಂಜಾಬ್‌ನಿಂದ ಮೆರವಣಿಗೆ ಹೊರಟ ನೂರಾರು ರೈತರನ್ನು ಹರಿಯಾಣ ಗಡಿಯ ಅಂಬಾಲದಲ್ಲಿ ತಡೆಯಲಾಗಿದೆ. ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಅಂಬಾಲದಲ್ಲಿ ರೈತರನ್ನು ತಡೆಯಲು ಮತ್ತು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದ್ದಾರೆ.
ಇದೇ ರೀತಿಯಲ್ಲಿ ರೈತರನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ವಹಿಸಿರುವ ದೆಹಲಿ ಪೊಲೀಸರು, ಈಗಾಗಲೇ ಸಾಕಷ್ಟು ಪ್ರಮಾಣದ ಅಶ್ರುವಾಯು ಶೆಲ್‌ಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ, ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಟೆಕಾನ್‌ಪುರದಲ್ಲಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಅಶ್ರುವಾಯು ಶೆಲ್ ಘಟಕದಿಂದ ಇನ್ನೂ 30,000 ಶೆಲ್‌ಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ನಡೆದ ಜಿ20 ಸಮ್ಮೇಳನದ ವೇಳೆ ಖರೀದಿಸಲಾದ ಶೆಲ್‌ಗಳು ಸದ್ಯ ದೆಹಲಿ ಪೊಲೀಸರ ಸಂಗ್ರಹದಲ್ಲಿವೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹೊಸದಾಗಿ ಹೆಚ್ಚುವರಿ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಪ್ರತಿಭಟನೆ ತಡೆ ಸಾಧನವಾಗಿ ಬಳಸುತ್ತವೆ.
ಅಶ್ರುವಾಯು ಶೆಲ್‌ಗಳ ಸಾಮರ್ಥ್ಯವು ಮೂರು ವರ್ಷಗಳ ಬಳಿಕ ಕ್ಷೀಣಿಸುತ್ತದೆ. ಆದಾಗ್ಯೂ ಅವುಗಳನ್ನು ಭದ್ರತಾ ಪಡೆಗಳ ತರಬೇತಿ ಸಲುವಾಗಿ ಏಳು ವರ್ಷಗಳ ವರೆಗೆ ಬಳಸಬಹುದಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಗೆ ಕಾನೂನು ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಫೆಬ್ರುವರಿ 13ರಂದು ಆರಂಭವಾಗಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇಶದ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳ ಸಾವಿರಾರು ರೈತರು ದೆಹಲಿಯ ಗಡಿ ಪ್ರದೇಶಗಳಿಗೆ ಬಂದು ಸೇರುತ್ತಿದ್ದಾರೆ.
ರೈತರೊಂದಿಗೆ ಕೇಂದ್ರ ತಂಡದ ಮಾತುಕತೆ
ಪ್ರತಿಭಟನಾನಿರತ ರೈತರ ಜೊತೆ ಕೇಂದ್ರ ಸರ್ಕಾರದ ಮೂವರು ಸಚಿವರ ತಂಡ ಇಂದು ಸಂಜೆ ಮಾತುಕತೆ ನಡೆಸಲಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಕೇಂದ್ರದ ತಂಡದಲ್ಲಿದ್ದು, ಸಂಜೆ 5ಕ್ಕೆ ಸಮಯ ನಿಗದಿಯಾಗಿದೆ.
ಸರ್ಕಾರವು ಈಗಾಗಲೇ ಎರಡು ಬಾರಿ (ಫೆಬ್ರುವರಿ 8 ಮತ್ತು 12ರಂದು) ಸಭೆ ನಡೆಸಿದೆಯಾದರೂ, ರೈತರ ಮನವೊಲಿಕೆ ಸಾಧ್ಯವಾಗಿಲ್ಲ.
ಸಂಜೆ ಸಭೆ ಮುಗಿಯುವವರೆಗೂ ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ಯಾವುದೇ ಪ್ರಯತ್ನ ಮಾಡಲ್ಲ ಎಂದು ರೈತ ನಾಯಕರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.