ಚಂಡೀಗಡ: ಕೇಂದ್ರ ಸರ್ಕಾರದ ‘ಅಗ್ನಿಪಥ’ ನೇಮಕಾತಿ ಯೋಜನೆಯ ವಿರುದ್ಧ ಹರಿಯಾಣದ ಕೆಲವು ಭಾಗಗಳಲ್ಲಿ ರಸ್ತೆ ತಡೆ ನಡೆಸಿ, ರೈಲುಗಳಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಲಾಗಿದೆ. ರೈತ ಸಂಘಟನೆಗಳು ಮತ್ತು ಖಾಪ್ ಪಂಚಾಯತ್‌ಗಳು ಈ ಹೋರಾಟಕ್ಕೆ ಧುಮುಕಿವೆ.
ಹಿಂಸಾಚಾರ ತಡೆಯುವ ಹಿನ್ನೆಲೆಯಲ್ಲಿ ಸರ್ಕಾರವು ಫರಿದಾಬಾದ್ ಜಿಲ್ಲೆಯ ಬಲ್ಲಬ್‌ಗಢದಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದೆ. ಆದರೆ ಗುರುಗ್ರಾಮದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಜನ ಗುಂಪುಗೂಡುವುದನ್ನು ನಿರ್ಬಂಧಿಸಿದೆ.
ರೋಹ್ಟಕ್, ಜಜ್ಜರ್, ನರ್ನಾಲ್, ಫರಿದಾಬಾದ್, ರೇವಾರಿ, ಚಾರ್ಖಿ ದಾದ್ರಿ ಮತ್ತು ಗುರುಗ್ರಾಮ್ ಜಿಲ್ಲೆಗಳಿಂದ ಪ್ರತಿಭಟನೆಗಳು ಹೆಚ್ಚಾಗಿ ವರದಿಯಾಗಿವೆ.
ಈ ಮಧ್ಯೆ, ಸೇನೆಯ ನೇಮಕಾತಿಗೆ ಸಂಬಂಧಿಸಿದ ಯೋಜನೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಇದನ್ನು ‘ಪರಿವರ್ತನೆಯ ಕ್ರಮ’ ಎಂದು ಬಣ್ಣಿಸಿದೆ.
ಭಾರತೀಯ ಕಿಸಾನ್ ಯೂನಿಯನ್ ( ಬಿಕೆಯು–ಚಧುನಿ) ರಾಜ್ಯ ಘಟಕದ ಅಧ್ಯಕ್ಷ ಗುರ್ನಾಮ್ ಸಿಂಗ್ ಚಧುನಿ ನೇತೃತ್ವದ ರೈತ ಹೋರಾಟಗಾರರು ರೋಹ್ಟಕ್‌ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯ ಎದುರು ಶುಕ್ರವಾರ ಒಂದು ದಿನದ ಉಪವಾಸ ಮತ್ತು ಪ್ರತಿಭಟನೆಯನ್ನು ನಡೆಸಿದರು.
‘ಅಗ್ನಿಪಥ’ ಯೋಜನೆಯು ದೇಶವಿರೋಧಿ ಮತ್ತು ದೇಶದ ಭದ್ರತೆಗೆ ಎದುರಾದ ಅಪಾಯ ಎಂದು ಕರೆದ ಚಧುನಿ, ತಕ್ಷಣವೇ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಯುವಕರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಿಂಸಾಚಾರದಲ್ಲಿ ತೊಡಗಬಾರದು ಎಂದೂ ಅವರು ಇದೇ ವೇಳೆ ಮನವಿ ಮಾಡಿದರು.
ಹೂಡಾ ಖಾಪ್ ಪಂಚಾಯತ್‌ನ ಅಧ್ಯಕ್ಷ ಓಂ ಪ್ರಕಾಶ್ ಹೂಡಾ ಕೂಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ಹಕ್ಕು. ಆದರೆ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಹೇಳಿದ ಹರಿಯಾಣದ ಗೃಹ ಸಚಿವ ಅನಿಲ್ ವಿಜ್, ‘ಹಿಂಸಾಚಾರದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.
ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿದೆ ಎಂದು ವಿಜ್ ಹೇಳಿದರು. ಗಲಭೆಕೋರರನ್ನು ಗುರುತಿಸಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಿಂದ್ ಜಿಲ್ಲೆಯ ನರ್ವಾನಾದಲ್ಲಿ ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಧರಣಿ ಕುಳಿತರು. ಸರಕು ಮತ್ತು ಪ್ರಯಾಣಿಕ ರೈಲುಗಳನ್ನು ತಡೆದರು. ಹೀಗಾಗಿ ಸ್ಥಳದಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.