ಲಖನೌ: ಉತ್ತರ ಪ್ರದೇಶದ ಲಖಿಂಪುರ– ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೋರಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
‘ಲಖಿಂಪುರ–ಖೇರಿಯಲ್ಲಿ ರೈತರಿಗೆ ಕಾರು ಗುದ್ದಿಸಿ ಕೆಳಗೆ ಬೀಳುವಂತೆ ಮಾಡಿದ್ದು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಮಗ. ಉತ್ತರ ಪ್ರದೇಶ ಸರ್ಕಾರವು ರಾಜಕೀಯ ಒತ್ತಡಕ್ಕೆ ಒಳಗಾಗಿ ಮೃತರ ಕುಟುಂಬಕ್ಕೆ ನೀಡಬೇಕಾದ ನ್ಯಾಯದ ನಿಗ್ರಹ ಮಾಡುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ಧಾರೆ.
ಮೃತಪಟ್ಟ ರೈತರ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಹೀಗಾಗಿ, ಮೋದಿಯವರು ಲಖನೌದಲ್ಲಿ ನಡೆಯಲಿರುವ ಡಿಜಿಪಿ ಮತ್ತು ಐಜಿಗಳ ಸಮ್ಮೇಳನದಲ್ಲಿ ಭಾಗವಹಿಸಬಾರದು. ‘ಅವರಿಗೆ(ಮೋದಿ) ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ಲಖಿಂಪುರ್ ಖೇರಿ ಪ್ರಕರಣದ ಆರೋಪಿಯ ತಂದೆ ಅಜಯ್ ಮಿಶ್ರಾ ಜೊತೆ ವೇದಿಕೆ ಹಂಚಿಕೊಳ್ಳಬಾರದು’ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾಗಿ ಅಜಯ್ ಮಿಶ್ರಾ ಮುಂದುವರೆದರೆ ರೈತರ ಕುಟುಂಬಗಳಿಗೆ ಖಂಡಿತಾ ನ್ಯಾಯ ಸಿಗುವುದಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.