ADVERTISEMENT

‘ದೆಹಲಿ ಚಲೋ’ ಮೆರವಣಿಗೆ: ಬಂದ್‌ ಮಾಡಲಾಗಿದ್ದ ಸಿಂಘು, ಟಿಕ್ರಿ ಗಡಿ ಭಾಗಶಃ ತೆರವು

ಪಿಟಿಐ
Published 24 ಫೆಬ್ರುವರಿ 2024, 15:54 IST
Last Updated 24 ಫೆಬ್ರುವರಿ 2024, 15:54 IST
<div class="paragraphs"><p>ಶಂಭು ಗಡಿಯಲ್ಲಿ ಧರಣಿ ಕುಳಿತಿರುವ ರೈತರು</p></div>

ಶಂಭು ಗಡಿಯಲ್ಲಿ ಧರಣಿ ಕುಳಿತಿರುವ ರೈತರು

   

–ಪಿಟಿಐ ಚಿತ್ರ

ನವದೆಹಲಿ/ ಚಂಡೀಗಢ: ರೈತರ ‘ದೆಹಲಿ ಚಲೋ’ ಮೆರವಣಿಗೆ ಕಾರಣದಿಂದ ಎರಡು ವಾರಗಳ ಹಿಂದೆ ಬಂದ್‌ ಮಾಡಲಾಗಿದ್ದ ಹರಿಯಾಣದ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಶನಿವಾರ ಭಾಗಶಃ ತೆರೆಯಲಾಯಿತು. ಈ ಗಡಿಯನ್ನು ಫೆಬ್ರುವರಿ 13ರಂದು ಮುಚ್ಚಲಾಗಿತ್ತು.

ADVERTISEMENT

ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಒಂದೊಂದು ಲೇನ್‌ ಅನ್ನು ತೆರೆಯಲಾಗುತ್ತಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇದರಿಂದ ದೆಹಲಿಯಿಂದ ಹರಿಯಾಣಕ್ಕೆ ಪ್ರಯಾಣಿಸುವವರಿಗೆ ತುಸು ನೆಮ್ಮದಿ ಸಿಗಲಿದೆ.

12ನೇ ದಿನವೂ ಮುಂದುವರಿದ ಧರಣಿ: ಪಂಜಾಬ್‌ ಮತ್ತು ಹರಿಯಾಣದ ಗಡಿಯಾದ ಖನೌರಿ ಮತ್ತು ಶಂಭುವಿನಲ್ಲಿ ರೈತರು ನಡೆಸುತ್ತಿರುವ ಧರಣಿ 12ನೇ ದಿನವಾದ ಶನಿವಾರವೂ ಮುಂದುವರಿಯಿತು. ಕಿಸಾನ್ ಮಜ್ದೂರ್‌ ಮೋರ್ಚಾ (ಕೆಎಂಎಂ) ಮತ್ತು ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಅಡಿಯಲ್ಲಿ ರೈತರು ಶನಿವಾರವೂ ಮೇಣದಬತ್ತಿ ಮೆರವಣಿಗೆ ನಡೆಸಿದರು.

ಖನೌರಿ ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಯುವ ರೈತ ಶುಭಕರಣ್‌ ಸಿಂಗ್‌ ಮೃತಪಟ್ಟಿದ್ದರಿಂದ, ರೈತ ಮುಖಂಡರು ಬುಧವಾರ ‘ದೆಹಲಿ ಚಲೋ’ಗೆ ಎರಡು ದಿನಗಳ ಮಟ್ಟಿಗೆ ವಿರಾಮ ಘೋಷಿಸಿದ್ದರು. ಶುಕ್ರವಾರ ಹಿಸಾರ್‌ನಲ್ಲಿ ಪುನಃ ಘರ್ಷಣೆ ನಡೆದ ಬೆನ್ನಲ್ಲೇ ರೈತ ಮುಖಂಡರು ವಿರಾಮವವನ್ನು ಇದೇ 29ರವರೆಗೂ ವಿಸ್ತರಿಸುವುದಾಗಿ ಘೋಷಿಸಿದ್ದರು.

‘ರೈತ ಶುಭಕರಣ್ ಸಾವಿಗೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಅಲ್ಲಿಯವರೆಗೂ ಮರಣೋತ್ತರ ಪರೀಕ್ಷೆ ನಡೆಸಲೂ ಬಿಡುವುದಿಲ್ಲ’ ಎಂದು ರೈತ ಮುಖಂಡ ಸರವಣ ಸಿಂಗ್‌ ಪಂಢೇರ ಪ್ರತಿಕ್ರಿಯಿಸಿದ್ದಾರೆ.

ಶನಿವಾರವೂ ಇಂಟರ್‌ನೆಟ್‌ ಸ್ಥಗಿತ: ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರವು ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಮತ್ತು ಎಸ್‌ಎಂಎಸ್‌ ಸೇವೆಗಳನ್ನು ಶನಿವಾರವೂ ಸ್ಥಗಿತಗೊಳಿಸಿತ್ತು. ಫೆಬ್ರುವರಿ 11ರಿಂದ ಈ ಸ್ಥಗಿತ ಚಾಲ್ತಿಯಲ್ಲಿದೆ.

ಗಾಯಗೊಂಡ ರೈತರ ಹಸ್ತಾಂತರಕ್ಕೆ ಮನವಿ

ಚಂಡೀಗಢ: ರೈತರ ‘ದೆಹಲಿ ಚಲೋ’ ಸಂದರ್ಭದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರೈತರನ್ನು ಪಂಜಾಬ್‌ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಪಂಜಾಬ್‌ ಮುಖ್ಯ ಕಾರ್ಯದರ್ಶಿ ಅನುರಾಗ್‌ ವರ್ಮಾ ಅವರು ಹರಿಯಾಣದ ಮುಖ್ಯ ಕಾರ್ಯದರ್ಶಿ ಸಂಜೀವ್ ಕೌಶಲ್ ಅವರಿಗೆ ಪತ್ರ ಬರೆದಿದ್ದಾರೆ.

ಫೆಬ್ರುವರಿ 21ರಂದು ಹರಿಯಾಣದ ಭದ್ರತಾ ಸಿಬ್ಬಂದಿ ಕೆಲ ರೈತರನ್ನು ಥಳಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಈ ಪೈಕಿ ಗಾಯಗೊಂಡ ಪಂಜಾಬ್‌ನ ಪ್ರೀತ್ಪಾಲ್‌ ಸಿಂಗ್‌ ಎಂಬುವವರು ರೋಹ್ಟಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ವರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪಂಜಾಬಿನಲ್ಲಿ ಪ್ರೀತ್ಪಾಲ್‌ ಸಿಂಗ್‌ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಹೀಗಾಗಿ ಅವರನ್ನು ಹಸ್ತಾಂತರಿಸುವಂತೆ ವರ್ಮಾ ಕೋರಿದ್ದಾರೆ.

‘ಪ್ರೀತ್ಪಾಲ್‌ ಸಿಂಗ್‌ ಅನ್ನು ಹರಿಯಾಣ ಪೊಲೀಸರು ಅಪರಹರಿಸಿ ಗಾಯಗೊಳಿಸಿದ್ದಾರೆ’ ಎಂದು ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್‌ ಸಿಂಗ್‌ ಮಜಿಥಿಯಾ ಶುಕ್ರವಾರ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.