ನವದೆಹಲಿ: ರೈತರ ಮೇಲೆ ಬಲಪ್ರಯೋಗ ಮಾಡದೇ ಇರಲು ನಿರ್ಧರಿಸಿದ್ದೆವು. ಆದರೆ ಅವರು ಆಕ್ರಮಣಕಾರಿಯಾಗಿ ವರ್ತಿಸಿದರು ಎಂದು ದೆಹಲಿ ಗಲಭೆಯಲ್ಲಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿ, ವಾಜಿರಾಬಾದ್‌ನ ಎಸ್‌ಎಚ್‌ಒ ಪಿ.ಸಿ.ಯಾದವ್ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿರುವ ಯಾದವ್ ಸದ್ಯ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಅನೇಕ ಮಂದಿ ಕೆಂಪುಕೋಟೆಗೆ ನುಗ್ಗಲು ಯತ್ನಿಸಿದಾಗ ನಾವು ಅಲ್ಲಿ ಕರ್ತವ್ಯ ನಿರತರಾಗಿದ್ದೆವು. ನಾವು ಅವರನ್ನು ಕೋಟೆಯ ಬಳಿಯಿಂದ ಆಚೆ ಕಳುಹಿಸಲು ಪ್ರಯತ್ನಿಸಿದೆವು. ಆದರೆ ಅವರು ಆಕ್ರಮಣಕಾರಿಯಾಗಿ ವರ್ತಿಸಿದರು. ನಾವು ರೈತರ ಮೇಲೆ ಬಲಪ್ರಯೋಗ ಮಾಡದಿರಲು ನಿರ್ಧರಿಸಿದ್ದೆವು. ಎಷ್ಟು ಸಾಧ್ಯವೋ ಅಷ್ಟು ಸಂಯಮದಿಂದ ಇದ್ದೆವು’ ಎಂದು ಯಾದವ್ ಹೇಳಿರುವುದನ್ನು ‘ಎಎನ್‌ಐ’ ಟ್ವೀಟ್ ಮಾಡಿದೆ.
ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಈವರೆಗೆ 22 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಮಂಗಳವಾರ ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ರೈತರ ಒಂದು ಗುಂಪು ನಗರದ ಬೀದಿಗಳಲ್ಲಿ ದಾಂದಲೆ ನಡೆಸಿತ್ತು. ಬ್ಯಾರಿಕೇಡ್‌ಗಳನ್ನು ಕಿತ್ತು ಒಗೆದು ಪೊಲೀಸರ ಮೇಲೂ ಹಲ್ಲೆ ಮಾಡಿತ್ತು. ಕೆಂಪುಕೋಟೆ ಆವರಣಕ್ಕೆ ನುಗ್ಗಿದ ನೂರಾರು ಪ್ರತಿಭಟನಕಾರರು ಐತಿಹಾಸಿಕ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನೂ ಹಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.