ನವದೆಹಲಿ/ಚಂಡೀಗಢ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಮತ್ತು ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ದೆಹಲಿ ಚಲೋ’ ಪ್ರತಿಭಟನೆ ಕೈಗೊಂಡಿರುವ ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ಅಗತ್ಯ ಸಿದ್ಧತೆಯಲ್ಲಿ ತೊಡಗಿರುವ ದೆಹಲಿ ಪೊಲೀಸರು 30,000ಕ್ಕೂ ಹೆಚ್ಚು ಅಶ್ರುವಾಯು ಶೆಲ್‌ಗಳ ಖರೀದಿಗೆ ಮುಂದಾಗಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ಹಲವು ಸಂಘಟನೆಗಳೊಂದಿಗೆ ಪಂಜಾಬ್‌ನಿಂದ ನೂರಾರು ರೈತರು ದೆಹಲಿಯತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದು, ಅವರನ್ನು ದೆಹಲಿಯಿಂದ 200 ಕಿ.ಮೀ. ದೂರದಲ್ಲಿರುವ ಅಂಬಾಲಾ ಬಳಿಯ ಹರಿಯಾಣದ ಗಡಿಯಲ್ಲಿ ತಡೆಯಲಾಗಿದೆ. ಈಗಾಗಲೇ ಪ್ರತಿಭಟನಾನಿರತರನ್ನು ಚದುರಿಸಲು ಹರಿಯಾಣ ಭದ್ರತಾ ಪಡೆಗಳು ಬುಧವಾರ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿವೆ.
ಇದನ್ನೂ ದಾಟಿ ಪ್ರತಿಭಟನಕಾರರು ಮುಂದೆ ಬಂದರೆ, ರೈತರ ಪ್ರತಿಭಟನೆಯನ್ನು ಸಿಂಘು (ಸೋನಿಪತ್ ಕಡೆ), ಟಿಕ್ರಿ (ಬಹದ್ದೂರ್ ಗಢ್ ಕಡೆ) ಮತ್ತು ಗಾಜಿಪುರ (ಗಾಜಿಯಾಬಾದ್ ಕಡೆ) ಗಡಿಗಳಲ್ಲಿಯೇ ತಡೆಯಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿರುವ ಸಿಬ್ಬಂದಿಗೆ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಅಶ್ರುವಾಯು ಶೆಲ್‌ಗಳು, ಜಲಫಿರಂಗಿ ಮತ್ತು ಇತರ ಗಲಭೆ ವಿರೋಧ ಉಪಕರಣಗಳನ್ನು ನೀಡಲಾಗಿದೆ.
ಅಲ್ಲದೆ, ಮಧ್ಯಪ್ರದೇಶದ ಗ್ವಾಲಿಯರ್‌ನ ಟೆಕನ್‌ಪುರದಲ್ಲಿರುವ ಬಿಎಸ್‌ಎಫ್‌ನ ‘ಟಿಯರ್ ಸ್ಮೋಕ್ ಯುನಿಟ್’ನಿಂದ 30,000ಕ್ಕೂ ಹೆಚ್ಚು ಅಶ್ರುವಾಯು ಶೆಲ್‌ಗಳ ಖರೀದಿಗೆ ಆದೇಶಿಸಲಾಗಿದ್ದು, ಅವುಗಳನ್ನು ದೆಹಲಿಗೆ ತರಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರೈತರು ಮತ್ತು ಅವರ ಟ್ರ್ಯಾಕ್ಟರ್– ಟ್ರಾಲಿಗಳು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ಎಚ್ಚರದಿಂದ ಕೆಲಸ ಮಾಡಬೇಕು ಎಂದು ಪೊಲೀಸರಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಈ ಭಾಗಗಳಲ್ಲಿ ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
10 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತ:
ರೈತರ ‘ದೆಹಲಿ ಚಲೋ’ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಂಜಾಬ್‌ನ ಮೂರು ಹಾಗೂ ಹರಿಯಾಣದ ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಪಂಜಾಬ್‌ನ ಪಟಿಯಾಲ, ಸಂಗ್ರೂರ್, ಫತೇಹಗಢ ಸಾಹಿಬ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹರಿಯಾಣ ಸರ್ಕಾರವೂ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳು ಮತ್ತು ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಬಂದ್‌ಗೆ ಬೆಂಬಲ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಶುಕ್ರವಾರ ನಡೆಸಲಿರುವ ಬಂದ್‌ಗೆ ರಾಜಸ್ಥಾನ ಕಾಂಗ್ರೆಸ್ ಬೆಂಬಲ ಸೂಚಿಸಿದೆ.
ರೈತರ ವಿಧಾನ ಸರಿಯಲ್ಲ– ಖಟ್ಟರ್:
‘ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲು ಅನುಸರಿಸುತ್ತಿರುವ ವಿಧಾನ ಒಪ್ಪಿತವಲ್ಲ. ಅವರು ಆಕ್ರಮಣಕಾರಿ ಸೈನ್ಯದಂತೆ ದೆಹಲಿಯತ್ತ ಸಾಗಲು ಪ್ರಯತ್ನಿಸುತ್ತಿರುವುದೂ ಸರಿಯಲ್ಲ’ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಖಟ್ಟರ್ ಗುರುವಾರ ಆಕ್ಷೇಪಿಸಿದರು.
‘ರೈತರು ಸೇನೆಯ ರೀತಿಯಲ್ಲಿ ಆಹಾರ ಸಾಮಗ್ರಿಗಳೊಂದಿಗೆ ಟ್ರ್ಯಾಕ್ಟರ್, ಟ್ರಾಲಿ, ಅರ್ಥ್ ಮೂವರ್‌ಗಳನ್ನು ಚಲಿಸಿಕೊಂಡು ದೆಹಲಿಯತ್ತ ಸಾಗುತ್ತಿದ್ದಾರೆ. ಅವರು ದೆಹಲಿಗೆ ಹೋಗುವುದಕ್ಕೆ ಅಭ್ಯಂತರವಿಲ್ಲ. ಆದಕ್ಕೆ ರೈಲು, ಬಸ್ಸು ಮತ್ತು ಅವರ ಸ್ವಂತ ವಾಹನಗಳಲ್ಲಿ ಚಲಿಸಲಿ. ಅದನ್ನು ಬಿಟ್ಟು ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್‌ಗಳಲ್ಲಿ ಸಾಗುವುದು ಸರಿಯಲ್ಲ’ ಎಂದು ಖಟ್ಟರ್ ಹೇಳಿದರು.
ರೈಲು ತಡೆದು ಪ್ರತಿಭಟನೆ
ಲೂಧಿಯಾನ/ ಹೋಶಿಯಾರ್‌ಪುರ (ಪಿಟಿಐ): ‘ದೆಹಲಿ ಚಲೋ’ ಪ್ರತಿಭಟನಕಾರರ ವಿರುದ್ಧ ಹರಿಯಾಣ ಪೊಲೀಸರ ಕ್ರಮವನ್ನು ಖಂಡಿಸಿ ಪಂಜಾಬ್‌ನ ಹಲವು ಸ್ಥಳಗಳಲ್ಲಿ ರೈತರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಇದರ ಪರಿಣಾಮ ದೆಹಲಿ– ಅಮೃತಸರ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಅಲ್ಲದೆ ಟೋಲ್ ಪ್ಲಾಜಾಗಳ ಬಳಿಯೂ ಧರಣಿ ನಡೆಸಿದ ಪ್ರತಿಭಟನಕಾರರು, ಟೋಲ್ ಶುಲ್ಕ ವಿಧಿಸದಂತೆ ಸಿಬ್ಬಂದಿಯನ್ನು ಒತ್ತಾಯಿಸಿದರು.
ಪಂಜಾಬ್‌ನ ವಿವಿಧೆಡೆ ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್), ಬಿಕೆಯು ದಕುಂದ (ಧನೇರ್) ಸಂಘಟನೆಯ ನೇತೃತ್ವದಲ್ಲಿ ರೈತರು ಸುಮಾರು 4 ಗಂಟೆಗಳ ಕಾಲ ರೈಲು ತಡೆ ನಡೆಸಿದರು. ‘ರೈತರು ಹಳಿಗಳ ಮೇಲೆ ಕುಳಿತಿದ್ದರಿಂದ ಕೆಲ ರೈಲುಗಳ ಮಾರ್ಗವನ್ನು ಬದಲಿಸಲಾಯಿತು. ಇನ್ನೂ ಕೆಲ ರೈಲುಗಳ ಸಂಚಾರವನ್ನು ಹಿಂದಿನ ನಿಲ್ದಾಣಗಳಲ್ಲಿ ಕೊನೆಗೊಳಿಸಲಾಯಿತು’ ಎಂದು ಭಾರತೀಯ ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಮಮತಾ ವಾಗ್ದಾಳಿ
ಕೋಲ್ಕತ್ತ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಕೇಂದ್ರದಲ್ಲಿ ರಾವಣ ಸರ್ಕಾರ ನಡೆಯುತ್ತಿದ್ದು, ಅದು ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿದೆ’ ಎಂದು ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಲಕ್ಷಣ ರೇಖೆಯನ್ನು ದಾಟಿದೆ. ರೈತರು ದೆಹಲಿ ತಲುಪಿದ ದಿನ, ಬಿಜೆಪಿ ನಾಯಕರಿಗೆ ವಾಸ್ತವ ಅರ್ಥವಾಗುತ್ತದೆ’ ಎಂದರು.
****
ದೇಶದ ರಕ್ಷಣೆಗಾಗಿ ಗಡಿಯಲ್ಲಿ ಸೈನಿಕರು ಹೋರಾಡುವ ರೀತಿಯಲ್ಲಿಯೇ ರೈತರು ದೇಶಕ್ಕಾಗಿ ಹೋರಾಡುತ್ತಿದ್ದಾರೆ
-ರಾಹುಲ್ ಗಾಂಧಿ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.