ADVERTISEMENT

ದೆಹಲಿ ಚಲೋ: 2 ವಾರದ ಬಳಿಕ ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಪುನರಾರಂಭ

ಪಿಟಿಐ
Published 25 ಫೆಬ್ರುವರಿ 2024, 6:52 IST
Last Updated 25 ಫೆಬ್ರುವರಿ 2024, 6:52 IST
<div class="paragraphs"><p>‘ದೆಹಲಿ ಚಲೋ’ ಪ್ರತಿಭಟನೆ </p></div>

‘ದೆಹಲಿ ಚಲೋ’ ಪ್ರತಿಭಟನೆ

   

–ಪಿಟಿಐ ಚಿತ್ರ

ಚಂಡೀಗಢ: ರೈತರ ‘ದೆಹಲಿ ಚಲೋ’ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣದ 7 ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿದ್ದ ಇಂಟರ್‌ನೆಟ್ ಸೇವೆಯನ್ನು ಇಂದು (ಭಾನುವಾರ) ಪುನರಾರಂಭ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹರಿಯಾಣ –ದೆಹಲಿಯ ಗಡಿ ಜಿಲ್ಲೆಗಳಾದ ಅಂಬಾಲ, ಕುರುಕ್ಷೇತ್ರ, ಕೈತಾಲ್‌, ಜಿಂದ್‌, ಹಿಸಾರ್‌, ಫತೇಹಬಾದ್‌ ಮತ್ತು ಸಿರ್ಸಾದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಹಾಗೂ ಎಸ್‌ಎಂಎಸ್‌ ಸೇವೆಯನ್ನು ಫೆಬ್ರುವರಿ 11ರಂದು ಸ್ಥಗಿತಗೊಳಿಸಲಾಗಿತ್ತು. ಅದಾದ ಬಳಿಕ ಫೆಬ್ರುವರಿ 24ರವರೆಗೆ ಕ್ರಮವನ್ನು ವಿಸ್ತರಿಸಲಾಗಿತ್ತು.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹರಿಯಾಣದ ದಬ್ವಾಲಿ ಸೇರಿದಂತೆ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್‌, ಹಿಸಾರ್, ಫತೇಹಾಬಾದ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ನಿರ್ಭಂಧಿಸಲಾಗಿತ್ತು ಎಂದು ಗೃಹ ಇಲಾಖೆ ತಿಳಿಸಿದೆ.

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಮತ್ತು ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ‘ದೆಹಲಿ ಚಲೋ’ ಹಮ್ಮಿಕೊಂಡಿದ್ದಾರೆ.

ರೈತರ ‘ದೆಹಲಿ ಚಲೋ’ ಮೆರವಣಿಗೆ ಕಾರಣದಿಂದ ಎರಡು ವಾರಗಳ ಹಿಂದೆ ಬಂದ್‌ ಮಾಡಲಾಗಿದ್ದ ಹರಿಯಾಣದ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಭಾಗಶಃ ತೆರೆಯಲಾಗಿದೆ.

ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಒಂದೊಂದು ಲೇನ್‌ ಅನ್ನು ತೆರೆಯಲಾಗುತ್ತಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದರಿಂದ ದೆಹಲಿಯಿಂದ ಹರಿಯಾಣಕ್ಕೆ ಪ್ರಯಾಣಿಸುವವರಿಗೆ ತುಸು ನೆಮ್ಮದಿ ಸಿಗಲಿದೆ.

13ನೇ ದಿನವೂ ಮುಂದುವರಿದ ಧರಣಿ

ಪಂಜಾಬ್‌ ಮತ್ತು ಹರಿಯಾಣದ ಗಡಿಯಾದ ಖನೌರಿ ಮತ್ತು ಶಂಭುವಿನಲ್ಲಿ ರೈತರು ನಡೆಸುತ್ತಿರುವ ಧರಣಿ 13ನೇ ದಿನವಾದ ಭಾನುವಾರವೂ ಮುಂದುವರಿದಿದೆ. ಕಿಸಾನ್ ಮಜ್ದೂರ್‌ ಮೋರ್ಚಾ (ಕೆಎಂಎಂ) ಮತ್ತು ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಖನೌರಿ ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಯುವ ರೈತ ಶುಭಕರಣ್‌ ಸಿಂಗ್‌ ಮೃತಪಟ್ಟಿದ್ದರಿಂದ, ರೈತ ಮುಖಂಡರು ಬುಧವಾರ ‘ದೆಹಲಿ ಚಲೋ’ಗೆ ಎರಡು ದಿನಗಳ ಮಟ್ಟಿಗೆ ವಿರಾಮ ಘೋಷಿಸಿದ್ದರು. ಶುಕ್ರವಾರ ಹಿಸಾರ್‌ನಲ್ಲಿ ಪುನಃ ಘರ್ಷಣೆ ನಡೆದ ಬೆನ್ನಲ್ಲೇ ರೈತ ಮುಖಂಡರು ವಿರಾಮವವನ್ನು ಇದೇ 29ರವರೆಗೂ ವಿಸ್ತರಿಸುವುದಾಗಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.