ರೈತರು ಸುಮಾರು ಒಂದು ವರ್ಷದಿಂದ ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ಮುಂದುವರಿಸಿದ್ದಾರೆ. ಒಂದು ವರ್ಗದ ರೈತರ ಮನವೊಲಿಕೆ ಸಾಧ್ಯವಾಗಲಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಮೂರೂ ಕೃಷಿ ಕಾಯ್ದೆಗಳನ್ನು ಸಂಸತ್ ಅಧಿವೇಶನದ ವೇಳೆ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಕಾಯ್ದೆ ಅಧಿಕೃತವಾಗಿ ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಈ ಸುದೀರ್ಘ ಹೋರಾಟದ ಹಾದಿಯ ಹಂತಗಳು ಇಲ್ಲಿವೆ...
* 2020ರ ಜೂನ್: ಮೂರು ಕೃಷಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ
ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೂ ಮಾರಾಟ ಮಾಡಲು ಅವಕಾಶ ನೀಡುವ, ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳ ಹೂಡಿಕೆಗೂ ಅವಕಾಶ ನೀಡುವ ನೂತನ ಕೃಷಿ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು 2020ರ ಜೂನ್‌ನಲ್ಲಿ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿತು.
* 2020ರ ಸೆಪ್ಟೆಂಬರ್: ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ
– ಸೆಪ್ಟೆಂಬರ್ 17: ಲೋಕಸಭೆಯಲ್ಲಿ ಅನುಮೋದನೆ
– ಸೆಪ್ಟೆಂಬರ್ 20: ಧ್ವನಿ ಮತದ ಮೂಲಕ ರಾಜ್ಯಸಭೆಯಲ್ಲಿ ಅನುಮೋದನೆ
– ಸೆಪ್ಟೆಂಬರ್ 24: ಪಂಜಾಬ್‌ನ ರೈತರಿಂದ ಮೂರು ದಿನಗಳ ರೈಲು ತಡೆ ಘೋಷಣೆ
– ಸೆಪ್ಟೆಂಬರ್ 24: ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಿಂದ ಪ್ರತಿಭಟನೆಗೆ ಕರೆ, ದೇಶದಾದ್ಯಂತ ರೈತರ ಪ್ರತಿಭಟನೆ
– ಸೆಪ್ಟೆಂಬರ್ 27ರಂದು ಕೃಷಿ ಕಾಯ್ದೆಗಳಿಗೆ ರಾಷ್ಟ್ರಪತಿಗಳ ಅಂಕಿತ
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆದು, ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯಲಾಯಿತು. ಈ ಕಾಯ್ದೆಗಳು ಕೃಷಿಗೆ, ರೈತರಿಗೆ ಮಾರಕ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಕೆಲವೇ ದಿನಗಳಲ್ಲಿ ರೈತ ಸಮುದಾಯವೇ ಈ ಕಾಯ್ದೆಗಳ ವಿರುದ್ಧ ಹೋರಾಟ ಆರಂಭಿಸಿತು.
* 2020ರ ನವೆಂಬರ್ 25: ಪಂಜಾಬ್, ಹರಿಯಾಣ ರೈತರಿಂದ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಆರಂಭ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಪದ್ಧತಿಗೆ ಸಂಬಂಧಿಸಿದಂತೆ ನೂತನ ಮೂರೂ ಕಾಯ್ದೆಗಳಲ್ಲಿ ಉಲ್ಲೇಖವಿಲ್ಲ. ಬೆಂಬಲ ಬೆಲೆ ಪದ್ಧತಿಯನ್ನು ಈ ಕಾಯ್ದೆಗಳು ರದ್ದುಪಡಿಸುತ್ತವೆ ಎಂಬುದು ರೈತರ ಆಕ್ಷೇಪವಾಗಿತ್ತು. ಆದರೆ ಬೆಂಬಲ ಬೆಲೆ ಪದ್ಧತಿ ತೆಗೆಯುವುದಿಲ್ಲ ಎಂಬುದು ಸರ್ಕಾರದ ಸಮರ್ಥನೆಯಾಗಿತ್ತು. ಬೆಂಬಲ ಬೆಲೆ ಪದ್ಧತಿ ರದ್ದುಪಡಿಸುವುದಿಲ್ಲ ಎಂಬುದು ಕೇವಲ ಮೌಖಿಕ ಭರವಸೆಯಾಗಿದ್ದ ಕಾರಣ, ರೈತರು ಈ ಕಾಯ್ದೆಗಳ ವಿರುದ್ಧ ಬೀದಿಗಿಳಿದರು. 2020ರ ನವೆಂಬರ್ 25ರಂದು ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.
ಈ ಮೆರವಣಿಗೆಯನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿತು. ಪಂಜಾಬ್‌ನ ರೈತರು ಬಿಜೆಪಿ ಆಡಳಿತವಿರುವ ಹರಿಯಾಣ ಪ್ರವೇಶಿಸದಂತೆ ತಡೆ ಒಡ್ಡಲಾಯಿತು. ಆದರೆ ಪೊಲೀಸರನ್ನು ಬದಿಗೊತ್ತಿ, ಅವರ ತಡೆಗೋಡೆಗಳನ್ನು ಮುರಿದು ರೈತರು ಮೆರವಣಿಗೆ ಮುಂದುವರಿಸಿದರು. ಕೊನೆಗೆ ರೈತರು ದೆಹಲಿ ಪ್ರವೇಶಿಸದಂತೆ ದೆಹಲಿ ಗಡಿಯನ್ನು, ಪೊಲೀಸರು ಬಂದ್ ಮಾಡಿದರು. ಹೆದ್ದಾರಿಗಳಿಗೆ ಅಡ್ಡಲಾಗಿ ಪೊಲೀಸರು ಕಂದಕ ತೋಡಿದರು, ಮುಳ್ಳುಬೇಲಿ ಹಾಕಿದರು, ಕಾಂಕ್ರೀಟ್ ಗೋಡೆ ನಿರ್ಮಿಸಿದರು, ಮೊಳೆಯ ಬೇಲಿ ನೆಟ್ಟರು. ಆದರೆ ದೆಹಲಿ ಗಡಿಯಲ್ಲಿ ಬೀಡುಬಿಟ್ಟ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ಹುರಿಗೊಳಿಸಿದರು. ಕಿಸಾನ್ ಸಂಯುಕ್ತ ಮೋರ್ಚಾ ಹೆಸರಿನಲ್ಲಿ ನಡೆದ ಈ ಹೋರಾಟದಲ್ಲಿ ಹಲವು ರೈತ ಸಂಘಟನೆಗಳು ಭಾಗಿಯಾದವು.
* 2020ರ ನವೆಂಬರ್ 28: ಪ್ರತಿಭಟನೆ ನಿಲ್ಲಿಸಿ ರೈತರನ್ನು ಮಾತುಕತೆಗೆ ಕರೆದ ಗೃಹ ಸಚಿವ ಅಮಿತ್ ಶಾ. ಆಹ್ವಾನ ತಿರಸ್ಕರಿಸಿ, ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸಲು ಬೇಡಿಕೆ ಇಟ್ಟ ರೈತರು.
* 2020ರ ನವೆಂಬರ್ 29: ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೃಷಿ ಕಾಯ್ದೆಗಳ ಕುರಿತು ಪ್ರಸ್ತಾಪ. 'ಎಲ್ಲ ಪಕ್ಷಗಳು ರೈತರಿಗೆ ಕೇವಲ ಭರವಸೆ ನೀಡುತ್ತಿದ್ದವು, ನಮ್ಮ ಸರ್ಕಾರಗಳು ಭರವಸೆಗಳನ್ನು ಈಡೇರಿಸಿದೆ' ಎಂದರು.
* 2020ರ ಡಿಸೆಂಬರ್ 3: ರೈತ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರವು ಮೊದಲ ಸುತ್ತಿನ ಮಾತುಕತೆ ನಡೆಸಿತು. ಆದರೆ, ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಲಿಲ್ಲ.
* 2020ರ ಡಿಸೆಂಬರ್ 5: ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಎರಡನೇ ಸುತ್ತಿನ ಮಾತುಕತೆ.
* 2020ರ ಡಿಸೆಂಬರ್ 8: ಭಾರತ್ ಬಂದ್‌ಗೆ ಕರೆ ನೀಡಿದ ರೈತರು. ದೇಶದ ಹಲವು ರಾಜ್ಯಗಳ ರೈತರಿಂದಲೂ ಬಂದ್‌ಗೆ ಬೆಂಬಲ.
* 2020ರ ಡಿಸೆಂಬರ್ 9: ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಮುಖಂಡರು. ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಣೆ.
* 2020ರ ಡಿಸೆಂಬರ್ 11: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಭಾರತೀಯ ಕಿಸಾನ್ ಯೂನಿಯನ್.
* 2020ರ ಡಿಸೆಂಬರ್ 21: ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ ರೈತರು.
* 2020ರ ಡಿಸೆಂಬರ್ 30: ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಆರನೇ ಸುತ್ತಿನ ಮಾತುಕತೆ. ವಿದ್ಯುತ್‌ಶಕ್ತಿ ತಿದ್ದುಪಡಿ ಮಸೂದೆ, 2020ಕ್ಕೆ ಬದಲಾವಣೆ ತರುವುದನ್ನು ಕೈಬಿಟ್ಟ ಸರ್ಕಾರ. ಕೃಷಿ ತ್ಯಾಜ್ಯ ಸುಡುವುದಕ್ಕೆ ವಿಧಿಸಲಾಗುವ ದಂಡದಿಂದ ರೈತರಿಗೆ ವಿನಾಯಿತಿ.
* 2021ರ ಜನವರಿ 4: ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಏಳನೇ ಸುತ್ತಿನ ಮಾತುಕತೆ.
* 2021ರ ಜನವರಿ 12: ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್, ನಾಲ್ವರು ಸದಸ್ಯರ ಸಮಿತಿ ರೂಪಿಸಿತು.
* 2021ರ ಜನವರಿ 26: ಗಣರಾಜ್ಯೋತ್ಸವ ದಿನದಂದು ದೆಹಲಿಗೆ ರೈತರ ಟ್ರ್ಯಾಕ್ಟರ್ ಮೆರವಣಿಗೆ
ರೈತರ ಜತೆ ಸರ್ಕಾರವು ಹಲವು ಸುತ್ತಿನ ಮಾತುಕತೆ ನಡೆಸಿದರೂ ಅವೆಲ್ಲವೂ ವಿಫಲವಾದವು. ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ತಮ್ಮ ಪಟ್ಟನ್ನು ರೈತರು ಸಡಿಲಗೊಳಿಸಲಿಲ್ಲ. ಸರ್ಕಾರವೂ ಕಾಯ್ದೆಗಳನ್ನು ರದ್ದುಪಡಿಸಲಿಲ್ಲ. ಗಣರಾಜ್ಯೋತ್ಸವದ ದಿನ ರೈತರು ದೆಹಲಿಗೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ಆ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಹಲವರಿಗೆ ಗಾಯಗಳಾದವು. ಒಬ್ಬ ಪ್ರತಿಭಟನಾಕಾರ ಸಾವಿಗೀಡಾದರು. ಕೆಂಪುಕೋಟೆಯ ಮೇಲೆ ರೈತರು ಪ್ರತಿಭಟನಾ ಧ್ವಜಾರೋಹಣ ನಡೆಸಿದರು. ಇದು ರೈತರ ಹೋರಾಟಕ್ಕೆ ದೊಡ್ಡ ಹಿನ್ನಡೆಯಾದಂತಾಯಿತು.
ಉತ್ತರ ಪ್ರದೇಶದ ರಾಕೇಶ್ ಟಿಕಾಯತ್ ಅವರು ಮತ್ತೆ ರೈತ ಹೋರಾಟಕ್ಕೆ ಕರೆ ನೀಡಿದರು. ಅವರು ಇಟ್ಟ ಕಣ್ಣೀರಿಗೆ ಸೋತ ರೈತವರ್ಗ ಮತ್ತೆ ಹೋರಾಟಕ್ಕೆ ಧುಮುಕಿತು. ಪಂಜಾಬ್ ಮತ್ತು ಹರಿಯಾಣ ರೈತರಷ್ಟೇ ನಡೆಸುತ್ತಿದ್ದ ಈ ಹೋರಾಟವು ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಕ್ಕೂ ಹರಡಿತು. ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ರೈತರು ಪಾಳಿಯ ಪ್ರಕಾರ ಭಾಗಿಯಾದರು. ಆ ಮೂಲಕ ಪ್ರತಿಭಟನೆ ಮತ್ತು ಕೃಷಿ ಚಟುವಟಿಕೆ ಎರಡನ್ನೂ ನಡೆಸಿದರು. ಈಗ ಈ ಹೋರಾಟಕ್ಕೆ ವರ್ಷ ತುಂಬುತ್ತಿದೆ.
* 2021ರ ಜನವರಿ 28: ಉತ್ತರ ಪ್ರದೇಶದ ಗಾಜಿಯಾಬಾದ್ ಆಡಳಿತವು ಪ್ರತಿಭಟನಾ ಸ್ಥಳವನ್ನು ರಾತ್ರಿಯೊಳಗೆ ತೆರವುಗೊಳಿಸುವಂತೆ ಆದೇಶಿಸಿತು. ಇದರಿಂದಾಗಿ ದೆಹಲಿಯ ಗಾಜಿಪುರ ಗಡಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪ್ರತಿಭಟನಾ ನಿರತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ 'ಹೋರಾಟದಿಂದ ಹಿಂದೆ ಸರಿಯುವುದಿಲ್ಲ' ಎಂಬ ಸಂದೇಶ ತಲುಪಿಸಿದರು.
* 2021ರ ಫೆಬ್ರುವರಿ 5: ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡಿದ್ದ ರೈತರ ಹೋರಾಟದ ಕುರಿತ 'ಟೂಲ್‌ಕಿಟ್' ಅನ್ನು ರೂಪಿಸಿದವರ ಮೇಲೆ ದೆಹಲಿ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗವು ಎಫ್‌ಐಆರ್ ದಾಖಲಿಸಿತು. ರಾಷ್ಟ್ರವಿರೋಧಿ, ಅಪರಾಧ ಸಂಚು ಹಾಗೂ ದ್ವೇಷ ಭಾವನೆ ಹಂಚುತ್ತಿರುವ ಆರೋಪಗಳನ್ನು ದಾಖಲಿಸಲಾಯಿತು.
* 2021ರ ಫೆಬ್ರುವರಿ 6: ದೇಶದಾದ್ಯಂತ ಮಧ್ಯಾಹ್ನ 12ರಿಂದ 3ರವರೆಗೂ ರಸ್ತೆ ತಡೆ ಪ್ರತಿಭಟನೆ.
* 2021ರ ಫೆಬ್ರುವರಿ 9: ಗಣರಾಜ್ಯೋತ್ಸವ ದಿನದ ಹಿಂಸಾಚಾರದ ಆರೋಪದ ಮೇಲೆ ಪಂಜಾಬ್‌ನ ನಟ, ಹೋರಾಟಗಾರ ದೀಪ್ ಸಿಧು ಅವರನ್ನು ಬಂಧಿಸಿದ ದೆಹಲಿ ಪೊಲೀಸರು. 7 ದಿನಗಳು ಪೊಲೀಸ್ ವಶಕ್ಕೆ.
* 2021ರ ಫೆಬ್ರುವರಿ 14: ಟೂಲ್‌ಕಿಟ್ ತಿದ್ದಿರುವ ಸಂಬಂಧ ಹವಾಮಾನ ಬದಲಾವಣೆ ಜಾಗೃತಿ ಅಭಿಯಾನ ನಡೆಸುತ್ತಿದ್ದ ದಿಶಾ ರವಿ (21) ಅವರನ್ನು ಬಂಧಿಸಿದ ದೆಹಲಿ ಪೊಲೀಸರು. ಫೆಬ್ರುವರಿ 23ರಂದು ಅವರಿಗೆ ದೆಹಲಿಯ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತು.
* 2021ರ ಫೆಬ್ರುವರಿ 18: ದೇಶದಾದ್ಯಂತ ರೈಲು ತಡೆ ಪ್ರತಿಭಟನೆ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ.
* 2021ರ ಫೆಬ್ರುವರಿ 26: ದಲಿತ ಕಾರ್ಮಿಕರ ಹೋರಾಟಗಾರ್ತಿ ನವದೀಪ್ ಕೌರ್ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ಜಾಮೀನು, ಜೈಲಿನಿಂದ ಬಿಡುಗಡೆ.
* 2021ರ ಮಾರ್ಚ್ 05: ಯಾವುದೇ ಷರತ್ತುಗಳೂ ಇಲ್ಲದೆ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಿರ್ಣಯ ಕೈಗೊಂಡ ಪಂಜಾಬ್ ವಿಧಾನಸಭೆ.
* 2021ರ ಮಾರ್ಚ್ 6: ದೆಹಲಿ ಗಡಿಯಲ್ಲಿ 100 ದಿನಗಳನ್ನು ಪೂರೈಸಿದ ರೈತರ ಪ್ರತಿಭಟನೆ.
* 2021ರ ಮೇ 27: ಆರು ತಿಂಗಳು ಪೂರೈಸಿದ ರೈತರ ಪ್ರತಿಭಟನೆ; ಕರಾಳ ದಿನವನ್ನಾಗಿ ಆಚರಣೆ.
* 2021ರ ಜೂನ್ 5: ಕೃಷಿ ಕಾಯ್ದೆಗಳನ್ನು ಕೇಂದ್ರ ಜಾರಿಗೆ ತಂದು ಒಂದು ವರ್ಷ; ಸಂಪೂರ್ಣ ಕ್ರಾಂತಿಕಾರಿ ದಿವಸವಾಗಿ ಆಚರಿಸಿದ ರೈತ ಹೋರಾಟಗಾರರು.
* 2021ರ ಜೂನ್ 26: ರೈತರ ಪ್ರತಿಭಟನೆಗೆ 7 ತಿಂಗಳು; ದೆಹಲಿಯತ್ತ ಹೊರಟ ಪ್ರತಿಭಟನಾಕಾರರು.
* 2021ರ ಜುಲೈ: ದೆಹಲಿಯ ಸಂಸತ್ ಭವನದ ಸಮೀಪ ಕೃಷಿ ಕಾಯ್ದೆಗಳನ್ನು ವಿರೋಧಿಸಿದ 'ಕಿಸಾನ್ ಸಂಸತ್' ನಡೆಸಿದ ರೈತರು.
* 2021ರ ಆಗಸ್ಟ್ 7: ಹದಿನಾಲ್ಕು ವಿರೋಧ ಪಕ್ಷಗಳ ಮುಖಂಡರು ಜಂತರ್ ಮಂತರ್‌ನ ಕಿಸಾನ್ ಸಂಸತ್ತಿಗೆ ಭೇಟಿ ನೀಡಲು ನಿರ್ಧರಿಸಿದರು.
* 2021ರ ಆಗಸ್ಟ್ 28: ಹರಿಯಾಣದ ಕರ್ನಾಲ್‌ನಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ, ಲಾಠಿ ಚಾರ್ಜ್ ಮಾಡಿದ ಪೊಲೀಸರು. ರೈತರ ಬುರುಡೆ ಹೊಡೆಯುವಂತೆ ಸೂಚನೆ ನೀಡಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ. ಅಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.
* 2021ರ ಸೆಪ್ಟೆಂಬರ್ 17: ರೈತರ ಹೋರಾಟಕ್ಕೆ ಒಂದು ವರ್ಷ
ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಅಂಗೀಕರಿಸಿ ಸೆಪ್ಟೆಂಬರ್ 17ಕ್ಕೆ ಒಂದು ವರ್ಷ ತುಂಬಿತು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಲವು ಸಂಘಟನೆಗಳು 'ಕರಾಳ ದಿನ'ವನ್ನಾಗಿ ಆಚರಿಸಿದವು.
* 2021ರ ಅಕ್ಟೋಬರ್: ರೈತರ ಪ್ರತಿಭಟನೆಯಿಂದ ಜನರ ಸಂಚಾರಕ್ಕೆ ಉಂಟಾಗಿರುವ ಅಡಚಣೆಯ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್. ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ತೆಗೆಯಲು ಮುಂದಾದ ದೆಹಲಿ ಪೊಲೀಸರು. ಪ್ರತಿಭಟನೆ ಮುಂದುವರಿಸಿದ ರೈತರು.
* 2021ರ ನವೆಂಬರ್ 19: ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ.
ಈ ಕೃಷಿ ಕಾಯ್ದೆಗಳಿಂದ ಆಗುವ ಅನುಕೂಲಗಳ ಬಗ್ಗೆ ಒಂದು ಭಾಗದ ರೈತರ ಮನವೊಲಿಸಲು ನಮಗೆ ಸಾಧ್ಯವಾಗಲಿಲ್ಲ. ಹಲವು ವಿಜ್ಞಾನಿಗಳು ಮಾಧ್ಯಮಗಳ ಮೂಲಕ ಅವರಿಗೆ ವಿವರಿಸಲು ಪ್ರಯತ್ನಿಸಿದರು. ನಾವು ರೈತರ ಮಾತುಗಳನ್ನು ಆಲಿಸಲು, ಅವರ ವಿಚಾರಗಳನ್ನು ತಿಳಿಯಲು ಪ್ರಯತ್ನ ಮಾಡಿದೆವು. ಆದರೆ, ಒಂದು ಭಾಗದ ರೈತರಿಗೆ ಅದನ್ನು ಅರ್ಥ ಮಾಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.
'ಎಲ್ಲ ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಾವು ನಿರ್ಧರಿಸಿದ್ದೇವೆ. ಆ ಬಗೆಗಿನ ಪ್ರಕ್ರಿಯೆಗಳನ್ನು ಸಂಸತ್ತಿನ ಅಧಿವೇಶನದ ವೇಳೆ ಆರಂಭಿಸಲಿದ್ದೇವೆ. ರೈತರು ತಮ್ಮ ಕುಟುಂಬಗಳಿಗೆ ಮರಳುವಂತೆ ಮನವಿ ಮಾಡುತ್ತೇನೆ' ಎಂದು ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.
'ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ ಅಧಿಕೃತವಾಗಿ ಹಿಂದಕ್ಕೆ ಪಡೆದ ನಂತರವೇ ನಾವು ಪ್ರತಿಭಟನೆಯನ್ನು ಕೈಬಿಡುತ್ತೇವೆ' ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.