ನವದೆಹಲಿ: ‘ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ’ ಒದಗಿಸುವುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರು, ಹರಿಯಾಣ–ಪಂಜಾಬ್ ಗಡಿಯಲ್ಲಿ ಹಾಕಿರುವ ಭಾರಿ ಭದ್ರತೆಯನ್ನು ಭೇದಿಸಿ ರಾಷ್ಟ್ರ ರಾಜಧಾನಿ ಪ್ರವೇಶಿಸಲು ಮಂಗಳವಾರ ಯತ್ನಿಸಿದರು.
‘ದೆಹಲಿ ಚಲೋ’ ರೈತರ ಪ್ರತಿಭಟನಾ ಮೆರವಣಿಗೆ ಆರಂಭವಾಗು ತ್ತಿದ್ದಂತೆ, ಅದರಲ್ಲಿ ಪಾಲ್ಗೊಂಡಿದ್ದ ಯುವಕರ ಗುಂಪೊಂದು ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಿ, ನುಗ್ಗಲು ಯತ್ನಿಸಿತು. ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗಿಸಿ ಗುಂಪನ್ನು ಚದುರಿಸಿದರು.
ಅಂಬಾಲಾ ಗಡಿಯಲ್ಲಿ ಕೆಲ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಪಂಜಾಬ್ ಮತ್ತು ಹರಿಯಾಣಕ್ಕೆ ಹೊಂದಿಕೊಂಡಿರುವ ಗಡಿಗಳಲ್ಲಿ ಜಲ ಫಿರಂಗಿ ವಾಹನಗಳನ್ನೂ ನಿಯೋಜನೆ ಮಾಡಲಾಗಿತ್ತು.
ಈ ಮಧ್ಯೆ, ತಾತ್ಕಾಲಿಕವಾಗಿ ಪ್ರತಿ ಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸಂಜೆ ಪ್ರಕಟಿಸಿದ ರೈತ ಮುಖಂಡರು, ಬೇಡಿಕೆಗಳ ಕುರಿತಂತೆ ಬುಧವಾರ ಬೆಳಿಗ್ಗೆ ಮತ್ತೆ ಚರ್ಚಿಸಲಾಗುತ್ತದೆ ಎಂದು ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ‘ಪ್ರತಿಭಟನೆ ನಡೆಸು ತ್ತಿದ್ದವರ ಪೈಕಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಬ್ಬರ್ ಗುಂಡುಗಳನ್ನು ಹೊಡೆಯುವ, ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿ ಸುವ ಮೂಲಕ ಸರ್ಕಾರ ನಮ್ಮನ್ನು
ಪ್ರಚೋದಿಸುತ್ತಿದೆ’ ಎಂದು ಹೇಳಿದರು.
ಮನವಿ:
ತಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಕಾರ್ಮಿಕ ಸಂಘಟನೆಗಳು ಫೆ.16ರಂದು ಕರೆ ನೀಡಿರುವ ಗ್ರಾಮೀಣ ಭಾರತ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಸಮಾನ ಮನಸ್ಕ ರೈತ ಸಂಘಟನೆಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮನವಿ ಮಾಡಿದೆ.
ಪ್ರಧಾನಿಗೆ ಪ್ರತ್ಯೇಕ ಪತ್ರ:
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಕ್ರಮ ಕೈಗೊಂಡಿರುವುದನ್ನು ಖಂಡಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
‘ರೈತ ಸಂಘಟನೆಗಳ ನಡುವೆ ಒಡಕಿದೆ ಎಂಬಂತೆ ಬಿಂಬಿಸಲು ಸರ್ಕಾರ ಯತ್ನಿಸುತ್ತಿದೆ’ ಎಂದೂ ಟೀಕಿಸಿದೆ.
‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ದಮನಕಾರಿ ಕ್ರಮಗಳನ್ನು ತೆಗೆದುಕೊಂಡಿವೆ. ಲಾಠಿ ಪ್ರಹಾರ ನಡೆಸುವುದು, ರಬ್ಬರ್ ಗುಂಡುಗಳನ್ನು ಹೊಡೆಯುವುದು ಹಾಗೂ ಅಶ್ರುವಾಯು ಪ್ರಯೋಗಿಸುವುದರ ಮೂಲಕ ದಬ್ಬಾಳಿಕೆ ನಡೆಸಿವೆ. ಈ ಮೂಲಕ, ಸಾಮಾನ್ಯ ರೈತರಿಗೆ ಭಯದ ವಾತಾವರಣ ನಿರ್ಮಿಸುತ್ತಿವೆ’ ಎಂದು ಎಸ್‌ಕೆಎಂ ಟೀಕಿಸಿದೆ.
ಅವಸರದಲ್ಲಿ ಕಾನೂನು ರಚನೆ ಅಸಾಧ್ಯ: ಮುಂಡಾ
ನವದೆಹಲಿ: ‘ಎಲ್ಲ ಭಾಗೀದಾರ ರೊಂದಿಗೆ ಮಾತುಕತೆ ನಡೆಸುವುದು ಅಗತ್ಯ. ಹೀಗಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನನ್ನು ಅವಸರದಲ್ಲಿ ರಚಿಸಲು ಸಾಧ್ಯ ಇಲ್ಲ’ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಮಂಗಳವಾರ ಹೇಳಿದ್ದಾರೆ.
‘ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪುಗಳು, ಈ ವಿಚಾರವಾಗಿ ಸರ್ಕಾರದೊಂದಿಗೆ ರಚನಾತ್ಮಕ ಚರ್ಚೆ ನಡೆಸಬೇಕು. ಅಷ್ಟಕ್ಕೂ, ಕೃಷಿಯು ರಾಜ್ಯಗಳಿಗೆ ಸಂಬಂಧಪಟ್ಟ ವಿಷಯ’ ಎಂದು ಹೇಳಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು, ‘ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಪ್ರತಿಭಟನೆಗೆ ಮಸಿ ಬಳಿಯಲು ಯತ್ನಿಸುವ ಬಗ್ಗೆ ರೈತರಲ್ಲಿ ಅರಿವು ಮತ್ತು ಜಾಗ್ರತೆ ಅಗತ್ಯ’ ಎಂದು ತಿಳಿಸಿದ್ದಾರೆ.
‘ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಎರಡು ಸುತ್ತು ಮಾತುಕತೆ ನಡೆಸಲಾಗಿದ್ದು, ಅವರ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ. ಆದರೆ, ಕೆಲ ವಿಷಯಗಳ ಕುರಿತು ಸಹಮತ ಮೂಡದ ಕಾರಣ ಮಾತುಕತೆ ನಡೆಯುತ್ತಿದೆ’ ಎಂದಿದ್ದಾರೆ.
‘ರೈತರ ಕೆಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿ ಕೊಂಡಿದ್ದು, ಅವುಗಳನ್ನು ಆಡಳಿತಾತ್ಮಕ ಹಂತದಲ್ಲಿಯೇ ಈಡೇರಿಸಬಹುದಾಗಿದೆ. ಎಂಎಸ್‌ಪಿಗೆ ಕಾನೂನು ಖಾತರಿ ನೀಡಬೇಕು ಎಂಬ ಬೇಡಿಕೆಯು ನೀತಿ ನಿರೂಪಣೆಗೆ ಸಂಬಂಧಪಟ್ಟಿರುವ ಕಾರಣ, ಸಮಗ್ರ ಪರಿಶೀಲನೆ ಅಗತ್ಯ’ ಎಂದರು.
ರಾಜ್ಯ ಸರ್ಕಾರಗಳು ಸೇರಿದಂತೆ ಸಂಬಂಧಿಸಿದ ಭಾಗೀದಾರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವ ಮುಂಡಾ ವಿವರಿಸಿದ್ದಾರೆ.
‘ರೈತರು ಸೇರಿದಂತೆ ಎಲ್ಲ ಭಾಗೀದಾರರ ಅಭಿವೃದ್ಧಿಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೃಢವಾದ ಕೆಲಸ ಮಾಡುತ್ತದೆ. ಆದರೆ, ಮುಂದಿನ ದಿನಗಳಲ್ಲಿ ವ್ಯರ್ಥ ಪ್ರಯತ್ನವೆನಿಸುವಂತಹ ಯಾವುದೇ ಘೋಷಣೆಗಳನ್ನು ಅವಸರದಲ್ಲಿ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಕೇಂದ್ರ ಸರ್ಕಾರ ಕೆಲ ಘೋಷಣೆಗಳನ್ನು ಮಾಡಬೇಕು ಎಂಬುದು ರೈತರ ಬಯಕೆ. ಆದರೆ, ಸರ್ಕಾರ ಇರುವುದು ಕೆಲಸ ಮಾಡುವುದಕ್ಕಾಗಿಯೇ ಹೊರತು, ಘೋಷಣೆಗಳನ್ನು ಮಾಡುವುದಕ್ಕಲ್ಲ. ಪರಿಪಕ್ವ ಚರ್ಚೆ ನಂತರ ಘೋಷಣೆ ಮಾಡಲಾಗುತ್ತದೆ. ಇಂತಹ ಪರಿಪಕ್ವ ಚರ್ಚೆ ನಡೆಸುವಾಗ ಪ್ರತಿಯೊಬ್ಬ ಭಾಗೀದಾರನ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ’ ಎಂದೂ ಹೇಳಿದ್ದಾರೆ.
****
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಬೆಳೆಗಳಿಗೆ ನೀಡುವ ಎಂಎಸ್‌ಪಿಗೆ ಕಾನೂನು ಖಾತರಿ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.