ಚಂಡೀಗಢ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌ನ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಶನಿವಾರ ಹರಿಯಾಣದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದೆ. ಇತ್ತ ಬಿಕೆಯು (ಏಕ್ತಾ ಉಗ್ರನ್) ಮೂವರು ಬಿಜೆಪಿ ಹಿರಿಯ ನಾಯಕರ ನಿವಾಸಗಳ ಮುಂದೆ ಧರಣಿ ನಡೆಸಿತು.
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಬಿಜೆಪಿಯ ಪಂಜಾಬ್ ಘಟಕದ ಮುಖ್ಯಸ್ಥ ಸುನೀಲ್ ಜಾಖರ್ ಮತ್ತು ಹಿರಿಯ ನಾಯಕ ಕೇವಲ್ ಸಿಂಗ್ ಧಿಲ್ಲೋನ್ ಅವರ ಮನೆಯ ಬಳಿ ಧರಣಿ ನಡೆಸಿದೆ.
ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿದ 'ದೆಹಲಿ ಚಲೋ' ಮೆರವಣಿಗೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ.
ಪಂಜಾಬ್‌ನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಪ್ರತಿಭಟನಾನಿರತ ರೈತರನ್ನು ತಡೆದಿದ್ದಾರೆ. ಹಾಗಾಗಿ ಅಂದಿನಿಂದ ಪ್ರತಿಭಟನಾಕಾರರು ಅಲ್ಲಿಯೇ ತಂಗಿದ್ದಾರೆ.
ಹರಿಯಾಣ ಮೂಲದ ಗುರ್ನಾಮ್ ಸಿಂಗ್ ಚಾರುಣಿ ನೇತೃತ್ವದ ಬಣವು (ಭಾರತೀಯ ಕಿಸಾನ್ ಯೂನಿಯನ್) ಕುರುಕ್ಷೇತ್ರ, ಯಮುನಾ ನಗರ ಮತ್ತು ಸಿರ್ಸಾ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿತು.
150ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗುರ್ನಾಮ್ ಸಿಂಗ್ ಚಾರುಣಿ, ಪಂಜಾಬ್‌ನ ಧರಣಿ ನಿರತ ರೈತರ ಬೇಡಿಕೆಗಳನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದರು.
ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಲು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಕುರುಕ್ಷೇತ್ರದಲ್ಲಿ ಭಾನುವಾರ ರೈತ ಸಂಘಟನೆಗಳು ಮತ್ತು ಕಾರ್ಮಿಕ ಮತ್ತು ಸರಪಂಚ್ ಒಕ್ಕೂಟಗಳ 'ಮಹಾಪಂಚಾಯತ್' ನಡೆಯಲಿದೆ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.