ADVERTISEMENT

ಕೇಂದ್ರ ಸಚಿವರ ಜೊತೆಗಿನ ರೈತರ ಮಾತುಕತೆ ವಿಫಲ: ಇಂದು ‘ದೆಹಲಿ ಚಲೋ’ ಶತಸಿದ್ಧ

ಪಿಟಿಐ
Published 13 ಫೆಬ್ರುವರಿ 2024, 2:35 IST
Last Updated 13 ಫೆಬ್ರುವರಿ 2024, 2:35 IST
   

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ನಡುವೆ, ಸೋಮವಾರ ರಾತ್ರಿ ಇಬ್ಬರು ಕೇಂದ್ರ ಸಚಿವರ ಜೊತೆ 5 ಗಂಟೆಗಳ ಕಾಲ ನಡೆದ ಮಾತುಕತೆ ಫಲಪ್ರದವಾಗಿಲ್ಲ. ಹಾಗಾಗಿ, ಇಂದು ಪ್ರತಿಭಟನೆ ನಡೆಯುವುದು ಶತಸಿದ್ಧವಾಗಿದೆ.

‘ನಮ್ಮ ಯಾವುದೇ ಬೇಡಿಕೆಗಳ ಬಗ್ಗೆ ಸರ್ಕಾರವು ಗಂಭೀರವಾಗಿದೆ ಎಂದು ನಮಗೆ ಅನಿಸುತ್ತಿಲ್ಲ. ಅವರು ನಮ್ಮ ಬೇಡಿಕೆಗಳನ್ನು ಈಡೇರಿಸಲು ಬಯಸುತ್ತಿಲ್ಲ ಎಂದು ನಾವು ಭಾವಿಸುತ್ತೇವೆ. ನಾಳೆ, ಬೆಳಿಗ್ಗೆ 10 ಗಂಟೆಗೆ ದೆಹಲಿಯತ್ತ ಮೆರವಣಿಗೆ ಕೈಗೊಳ್ಳುತ್ತೇವೆ’ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಇಲ್ಲಿ ಸುದ್ದಿಗಾರರಿಗೆ ಸೋಮವಾರ ರಾತ್ರಿ ತಿಳಿಸಿದರು. ಸಭೆಯು ಮಧ್ಯರಾತ್ರಿಯ ಮುನ್ನ ಅಂತ್ಯಗೊಂಡಿತು.

ಆದರೆ, ರೈತ ಮುಖಂಡರು ತಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಬೇಡಿಕೆಗೆ ಅಚಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಚಿವರಾದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವ ಅರ್ಜುನ್ ಮುಂಡಾ ಅವರು ದೆಹಲಿಯ ಸೆಕ್ಟರ್ 26ರ ಮಹಾತ್ಮ ಗಾಂಧಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ರೈತ ಮುಖಂಡರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಸೇರಿದಂತೆ ಇತರರು ಸಂಜೆ 6.30ರ ಸುಮಾರಿಗೆ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಬಳಿಕ ಮಾತನಾಡಿದ ಪಂಧೇರ್, ‘ನಾವು ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ಪ್ರತಿಯೊಂದು ವಿಷಯದ ಬಗ್ಗೆಯೂ ಮಾತನಾಡಿದ್ದೇವೆ. ಸಂಘರ್ಷವನ್ನು ತಪ್ಪಿಸುವುದು ನಮ್ಮ ಪ್ರಯತ್ನವಾಗಿತ್ತು. ಅವರೊಂದಿಗೆ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಬಯಸಿದ್ದೆವು. ಸರ್ಕಾರವು ಯಾವುದಾದರೂ ಭರವಸೆ ನೀಡಿದ್ದರೆ ನಮ್ಮ ಆಂದೋಲನವನ್ನು ಮರುಪರಿಶೀಲಿಸಬಹುದಿತ್ತು’ ಎಂದಿದ್ದಾರೆ.

ಸರ್ಕಾರದ ಉದ್ದೇಶ ಸರಿ ಇಲ್ಲ ಎಂದು ಕಿಡಿಕಾರಿದ ಅವರು, ‘ನಮಗೆ ಏನನ್ನೂ ಕೊಡಲು ಅವರಿಗೆ ಇಷ್ಟವಿಲ್ಲ. ನಿರ್ಧಾರ ಕೈಗೊಳ್ಳುವಂತೆ ನಾವು ಕೇಂದ್ರ ಸಚಿವರಿಗೆ ಹೇಳಿದೆವು. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬದ್ಧ ಭರವಸೆ ನೀಡಬೇಕೆಂಬ ರೈತರ ಬೇಡಿಕೆ ಬಗ್ಗೆ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2020-21ರ ಆಂದೋಲನದ ಸಂದರ್ಭದಲ್ಲಿ ದಾಖಲಾದ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರವು ಒಪ್ಪಿಗೆ ನೀಡಿದೆ. ಆಗ ಜೀವ ಕಳೆದುಕೊಂಡ ರೈತರ ಕುಟುಂಬಕ್ಕೂ ಪರಿಹಾರ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಎಂಎಸ್‌ಪಿಗೆ ಕಾನೂನು ಖಾತರಿ ಮತ್ತು ಸಾಲ ಮನ್ನಾ ನಮ್ಮ ಪ್ರಮುಖ ಬೇಡಿಕೆ ಎಂದು ರೈತ ಮುಖಂಡರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.