ನವದೆಹಲಿ: ಕೇಂದ್ರದ ಪ್ರಸ್ತಾವವನ್ನು ತಿರಸ್ಕರಿಸಿದ ಪ್ರತಿಭಟನಾ ನಿರತ ರೈತರು ಇಂದಿನಿಂದ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ರಾಷ್ಟ್ರರಾಜಧಾನಿಯಲ್ಲಿ ಭದ್ರತೆ ಬಿಗಿ ಮಾಡಲಾಗಿದೆ. ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳಲ್ಲಿ ಪೊಲೀಸರು ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿಯ ಕೇಂದ್ರ ಭಾಗಕ್ಕೆ ಹೋಗುವ ವಿವಿಧ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಕಾಡಬಹುದು. ಪ್ರಯಾಣಿಕರು ಸಂಚಾರ ದಟ್ಟಣೆಯನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಗಾಗಲೇ ಟಿಕ್ರಿ ಮತ್ತು ಸಿಂಘು ಗಡಿಗಳನ್ನು ಬಂದ್ ಮಾಡಲಾಗಿದ್ದು, ಪೊಲೀಸರು ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜತೆಗೆ ಕಾಂಕ್ರೀಟ್ ಮತ್ತು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಗತ್ಯಬಿದ್ದರೆ, ಗಾಜಿಪುರ ಗಡಿಯನ್ನು ಬುಧವಾರವೂ ಬಂದ್ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಬ್ಬ ಪ್ರತಿಭಟನಾಕಾರ ಅಥವಾ ಒಂದು ವಾಹನವೂ ದೆಹಲಿಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ದೆಹಲಿ ಪೊಲೀಸರು ಈಗಾಗಲೇ 30,000 ಅಶ್ರುವಾಯು ಶೆಲ್‌ಗಳನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿವೆ.
ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ಕಳೆದ ವಾರದಿಂದ ಸಾವಿರಾರು ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನೀಡಿದ್ದ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಐದು ವರ್ಷಗಳವರೆಗೆ ಖರೀದಿಸುವ ಪ್ರಸ್ತಾವವನ್ನೂ ತಿರಸ್ಕರಿಸಿದ ರೈತ ಮುಖಂಡರು ಇಂದು ದೆಹಲಿ ಪ್ರವೇಶಿಸಲು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.