ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೆ ಭಯೋತ್ಪಾದನೆ ಹೆಚ್ಚಾಗಲಿದೆ ಎಂದು ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಜನರ ದಾರಿತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಕಿಡಿಕಾರಿದ್ದಾರೆ.
‘370ನೇ ವಿಧಿಯಡಿ ನೀಡಲಾಗಿದ್ದ ಸ್ಥಾನಮಾನ ತೆಗೆದಾಗಿನಿಂದ 5 ವರ್ಷಗಳಿಂದ ನಿಮ್ಮದೇ ಆಡಳಿತವಿದೆ. ಇಲ್ಲಿನ ಭಯೋತ್ಪಾದನೆಗೆ 370ನೇ ವಿಧಿ ಕಾರಣ ಎಂದು ನೀವು ಪದೇ ಪದೇ ಹೇಳುತ್ತೀರಿ. ಈಗ 370ನೇ ವಿಧಿಯಡಿ ನೀಡಲಾಗಿದ್ದ ಸ್ಥಾನಮಾನವಿಲ್ಲ. ಆದರೂ ಈ ಉಗ್ರರು ಎಲ್ಲಿಂದ ಬಂದರು? ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಲು ಬಯಸುತ್ತೇನೆ’ಎಂದು ಫಾರೂಕ್ ಹೇಳಿದ್ದಾರೆ.
‘ಜನರನ್ನು ಕೊಲ್ಲುತ್ತಿರುವ ಮತ್ತು ಯೋಧರನ್ನು ಹುತಾತ್ಮರನ್ನಾಗಿಸುತ್ತಿರುವ ಈ ಗನ್‌ಗಳು ಎಲ್ಲಿಂದ ಬಂದವು. ಇವತ್ತು ನಮ್ಮ ಸರ್ಕಾರವಿಲ್ಲ. ಇದಕ್ಕೆ ಮೋದಿ ಉತ್ತರ ಕೊಡಲಿ’ಎಂದು ಗಂದೇರವಾಲ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಓಮರ್ ಅಬ್ದುಲ್ಲಾ ಪರ ಪ್ರಚಾರದ ವೇಳೆ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ತರುವುದಕ್ಕೂ ಮುನ್ನ ಎಚ್ಚರವಾಗಿರಿ. ಅವರ ನೀತಿಗಳು ಭಯೋತ್ಪಾದಕರಿಗೆ ಅನುಕೂಲಕರವಾಗಿರುತ್ತವೆ. ಯುವನಾಯಕತ್ವವನ್ನು ಒಪ್ಪುವುದಿಲ್ಲ ಎಂದು ಮೋದಿ ಹೇಳಿದ್ದರು.
ಮತ್ತೊಬ್ಬರ ಕಡೆ ಒಂದು ಬೆರಳನ್ನು ತೋರಿಸುವಾಗ, ಮೂರು ಬೆರಳು ತಮ್ಮತ್ತಲೇ ಬೊಟ್ಟು ಮಾಡುತ್ತವೆ ಎಂಬುದನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಫಾರೂಕ್ ಹೇಳಿದ್ದಾರೆ.
1987ರ ಚುನಾವಣೆ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಯಿತು ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಅವರು, ಹಿಂಸಾಚಾರ ನಡೆಸುವಂತೆ ಪ್ರತ್ಯೇಕತಾವಾದಿಗಳಿಗೆ ನಾನು ಸೂಚಿಸಿಲ್ಲ ಎಂದಿದ್ದಾರೆ.
‘ನಾನು ಅವರನ್ನು ಪ್ರತ್ಯೇಕತಾವಾದಿಗಳನ್ನಾಗಿ ಮಾಡಿಲ್ಲ. ನಮ್ಮ ಪಕ್ಷವು ಅವರನ್ನು ರೂಪಿಸಿಲ್ಲ. ಅವರು ಪಾಕಿಸ್ತಾನಕ್ಕೆ ಸೇರುವ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರು ಈಗ ಬಿಜೆಪಿ ಜೊತೆಗೇ ಇದ್ದಾರೆ’ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.