ADVERTISEMENT

ನಾಗರಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಫರೂಕ್ ಅಬ್ದುಲ್ಲಾ ಬಂಧನ 

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 11:55 IST
Last Updated 16 ಸೆಪ್ಟೆಂಬರ್ 2019, 11:55 IST
ಫರೂಕ್ ಅಬ್ದುಲ್ಲಾ
ಫರೂಕ್ ಅಬ್ದುಲ್ಲಾ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರನ್ನು ನಾಗರಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ (ಪಿಎಸ್‌ಎ) ಸೋಮವಾರ ಬಂಧಿಸಲಾಗಿದೆ.

ಸಾರ್ವಜನಿಕ ಆದೇಶಕ್ಕೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ಆರೋಪದಲ್ಲಿ 81ರ ಹರೆಯದ ರಾಜಕಾರಣಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫರೂಕ್ ಅಬ್ದುಲ್ಲಾ ಅವರನ್ನು ಬಂಧಿಸಿದ್ದು, ಮೂರು ತಿಂಗಳ ಕಾಲ ಇವರನ್ನು ಬಂಧನದಲ್ಲಿಡಲಾಗುವುದು.

ಇಲ್ಲಿಯವರೆಗೆ ಫರೂಕ್ ಅವರನ್ನುಶ್ರೀನರಗದಲ್ಲಿರುವ ಮನೆಯಲ್ಲಿಗೃಹ ಬಂಧನದಲ್ಲಿರಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಹೊತ್ತಲ್ಲಿ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಸೇರಿದಂತೆ ಹಲವಾರು ರಾಜಕಾರಣಿಗಳನ್ನು ಬಂಧಿಸಲಾಗಿತ್ತು.

ಆಗಸ್ಟ್ 6ರಂದು ಲೋಕಸಭೆಯಲ್ಲಿ ಫರೂಕ್ ಅಬ್ದುಲ್ಲಾ ಅನುಪಸ್ಥಿತಿ ಬಗ್ಗೆ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, ಅಬ್ದುಲ್ಲಾ ಅವರನ್ನು ಬಂಧಿಸಿಲ್ಲ, ವಶಕ್ಕೆ ತೆಗೆದುಕೊಳ್ಳಲೂ ಇಲ್ಲ. ಅವರು ಅವರಿಷ್ಟದ ಪ್ರಕಾರ ಮನೆಯಲ್ಲಿದ್ದಾರೆ ಎಂದಿದ್ದರು.

ಇದೇ ಮೊದಲ ಬಾರಿ ಪಿಎಸ್‌ಎಯಡಿಯಲ್ಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಲಾಗಿದೆ. ಸಾಮಾನ್ಯವಾಗಿ ಈ ಕಾಯ್ದೆಯಡಿ ಉಗ್ರರನ್ನು, ಪ್ರತ್ಯೇಕತಾವಾದಿ ಅಥವಾ ಕಲ್ಲುತೂರಾಟಗಾರರನ್ನು ಬಂಧಿಸಲಾಗುತ್ತದೆ.

ವಿಶ್ವಸಂಸ್ಥೆಯ ಮಹಾಸಭೆಗೆ ಕೆಲವೇ ದಿನಗಳು ಉಳಿದಿರುವ ಈ ಹೊತ್ತಲ್ಲಿ ಈ ರೀತಿಯ ಬಂಧನದ ಬಗ್ಗೆ ಅಬ್ದುಲ್ಲಾ ಅವರು ಮಾಧ್ಯಮಗಳ ಮುಂದೆ ಹೇಳಿದರೆ ಇದು ಕೇಂದ್ರ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಲಿದೆ.

ಚೆನ್ನೆೈನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಫರೂಕ್ ಅಬ್ದುಲ್ಲಾ ಅವರಿಗೆ ಅನುವು ಮಾಡಿಕೊಡಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದಸುಪ್ರೀಂಕೋರ್ಟ್, ಈ ಸಂಬಂಧ ಕೇಂದ್ರ ಮತ್ತು ಜಮ್ಮು ಕಾಶ್ಮೀರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ತಮಿಳುನಾಡಿನ ಪ್ರಥಮ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ ಜನ್ಮದಿನಾಚರಣೆಯಂಗವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಬ್ದುಲ್ಲಾ ಅವರಿಗೆ ಆಹ್ವಾನವಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರಿಗೆ ಅನುಮತಿ ನೀಡಬೇಕು ಎಂದು ತಮಿಳುನಾಡಿನ ಎಂಡಿಎಂಕೆ ನಾಯಕ ವೈಕೊ ಒತ್ತಾಯಿಸಿದ್ದಾರೆ. ಈ ರೀತಿ ಅನಧಿಕೃತ ಬಂಧನವು ಸಂವಿಧಾನದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವೈಕೊ, ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.

ಸರ್ಕಾರದ ನಡೆ ಕಾನೂನುಬಾಹಿರ, ಸ್ವೇಚ್ಛೆಯಿಂದ ಕೂಡಿದ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಯಾಗಿದೆ. ಬಂಧನ ಮತ್ತು ವಶಕ್ಕೆ ತೆಗೆದುಕೊಳ್ಳುವುದು ಪ್ರಜಾಪ್ರುಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತ್ರಂತ್ರ್ಯವನ್ನು ವಿರೋಧಿಸುವುದಾಗಿದೆ ಎಂದಿದ್ದಾರೆ ವೈಕೊ.
ವೈಕೊ ಮನವಿಗೆ ವಿರೋಧ ವ್ಯಕ್ತ ಪಡಿಸಿದ ಕೇಂದ್ರ ಸರ್ಕಾರ, ವೈಕೊ ಅವರು ಫರೂಕ್ ಅಬ್ದುಲ್ಲಾ ಅವರ ಸಂಬಂಧಿ ಅಲ್ಲ. ಜಮ್ಮು ಕಾಶ್ಮೀರದ ನಾಯಕನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿರುವ ವೈಕೊ ಅವರ ಮನವಿಯು ಕಾನೂನು ಪ್ರಕ್ರಿಯೆಯ ದುರ್ಬಳಕೆ ಎಂದು ಹೇಳಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾಗ ಎಸ್‌ಎ ಬೋಬ್ಡೆ ಮತ್ತು ಎಸ್‌ಎ ನಜೀರ್ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಕಳುಹಿಸಿದ್ದು, ಸೆಪ್ಟೆಂಬರ್ 30 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.