ADVERTISEMENT

ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆ: ಫಾರೂಕ್‌, ಮುಫ್ತಿ, ಆಜಾದ್‌ ಸ್ಪರ್ಧೆ ಇಲ್ಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 15:29 IST
Last Updated 30 ಆಗಸ್ಟ್ 2024, 15:29 IST
ಫಾರೂಕ್‌ ಅಬ್ದುಲ್ಲಾ
ಫಾರೂಕ್‌ ಅಬ್ದುಲ್ಲಾ   

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಳಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ.

ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ ಹಾಗೂ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್‌ ಆಜಾದ್‌ ಅಲಯನ್ಸ್‌ನ (ಡಿಪಿಎಪಿ) ಗುಲಾಮ್‌ ನಬಿ ಆಜಾದ್‌ ಅವರು, 19080 ರಿಂದ 2018ರ ನಡುವೆ, ಈ ಹಿಂದಿನ ಜಮ್ಮು–ಕಾಶ್ಮೀರ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆದರೆ, ಈ ಮೂವರು ಹಿರಿಯ ರಾಜಕಾರಣಿಗಳು ಈ ಬಾರಿಯ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ದಿಢೀರ್‌ ರಾಜಕೀಯ ಬೆಳವಣಿಗೆಯಿಂದಾಗಿ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏಕೈಕ ಸ್ಪರ್ಧಿ ಎನಿಸಿದ್ದಾರೆ.

ADVERTISEMENT

ವಯಸ್ಸು, ವಯೋಸಹಜ ಆರೋಗ್ಯ ಸಮಸ್ಯೆಗಳು ಹಾಗೂ ಪಕ್ಷದ ಚುಕ್ಕಾಣಿಯನ್ನು ಯುವಕರಿಗೆ ನೀಡಬೇಕು ಎಂಬ ಕಾರಣಗಳಿಂದಾಗಿ, ಫಾರೂಕ್‌ ಅಬ್ದುಲ್ಲಾ ಅವರು ಸ್ಪರ್ಧೆ ಮಾಡದಿರಲು ನಿರ್ಧರಿಸಬಹುದು ಎನ್ನಲಾಗುತ್ತಿದೆ.

370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಿದ ನಂತರ, ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ ಎಂದಿದ್ದ ಮೆಹಬೂಬಾ ಮುಫ್ತಿ, ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ.

‘ಒಂದು ವೇಳೆ ನಾನು ಗೆದ್ದು, ಮುಖ್ಯಮಂತ್ರಿಯಾದರೂ, ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಆಗುವುದಿಲ್ಲ’ ಎಂದೂ ಅವರು ಹೇಳಿದ್ದು ಗಮನಾರ್ಹ.

ಕಾಂಗ್ರೆಸ್‌ನಿಂದ ಹೊರಬಂದು, 2022ರಲ್ಲಿ ಡಿಪಿಎಪಿ ಪಕ್ಷ ಸ್ಥಾಪಿಸಿರುವ ಆಜಾದ್‌ ಅವರು ಕೂಡ ಈ ಬಾರಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಹೊಸದಾಗಿ ಕಟ್ಟಿರುವ ರಾಜಕೀಯ ಪಕ್ಷವನ್ನು ನೆಲೆಯೂರುವಂತೆ ಮಾಡುವುದು ಕಷ್ಟದ ಕೆಲಸ ಎಂಬುದನ್ನು ಅವರೂ ಒಪ್ಪಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.