ರಾಷ್ಟ್ರ ರಾಜಧಾನಿ ಮೇಲೆ ಎಎಪಿ ಮತ್ತೆ ಹಿಡಿತ ಸಾಧಿಸಿದ್ದು, ಬಿಜೆಪಿ ತನ್ನ ದೌರ್ಬಲ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಲೋಕಸಭಾ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ, ದೆಹಲಿ ವಿಧಾನಸಭೆ ಮಾತ್ರ ಬಿಜೆಪಿಗೆ ಕೈಗೆಟುಕುತ್ತಿಲ್ಲ.
1998ರಲ್ಲಿ ಸುಷ್ಮಾ ಸ್ವರಾಜ್ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡ ದಿನದಿಂದ ಬಿಜೆಪಿಯು ಮರಳಿ ಅಧಿಕಾರ ಪಡೆಯಲು ಮಾಡಿದ ಸತತ ಯತ್ನಗಳು ವಿಫಲವಾಗುತ್ತಿವೆ. ವೈದ್ಯ ಹರ್ಷವರ್ಧನ್, ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಭೋಜಪುರಿ ನಟ ಮನೋಜ್ ತಿವಾರಿ ಅವರನ್ನು ಪ್ರಯೋಗಿಸಿದರೂ ಗದ್ದುಗೆ ದಕ್ಕುತ್ತಿಲ್ಲ. ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರ ಚುನಾವಣಾ ಕೌಶಲ ಹಾಗೂ ತಂತ್ರಗಾರಿಕೆಗಳು ಮತ ತಂದುಕೊಡುತ್ತಿಲ್ಲ.
ಬಿಜೆಪಿ ನಾಯಕರ ತೀವ್ರ ಸ್ವರೂಪದ ಪ್ರಚಾರ ವೈಖರಿಯಿಂದಾಗಿ ದೆಹಲಿ ಪ್ರತಿಷ್ಠೆಯ ಕಣವಾಗಿತ್ತು. ಹಿಂದುತ್ವ ಮತ್ತು ರಾಷ್ಟ್ರೀಯವಾದದ ನೆಲೆಯಲ್ಲಿ ಕಣಕ್ಕಿಳಿದ ಪಕ್ಷದ ಬಳಿ ಬೇರಾವ ಅಸ್ತ್ರಗಳೂ ಇರಲಿಲ್ಲ. ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್, ಪ್ರವೇಶ್ ಸಾಹಿಬ್ ಸಿಂಗ್ ವರ್ಮಾ ಅವರ ಭಾಷಣಗಳು ಆಯೋಗದ ಕೆಂಗಣ್ಣಿಗೆ ತುತ್ತಾದವು.
‘ಗೋಲಿ ಮಾರೋ’ ಎಂಬಂತಹ ಮಾತುಗಳು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ಪಕ್ಷವು ರಾಷ್ಟ್ರೀಯ ವಿಷಯಗಳನ್ನು ಪ್ರಸ್ತಾಪಿಸಿದರೆ, ಕೇಜ್ರಿವಾಲ್ ಅವರು ಸ್ಥಳೀಯ ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರು. ಸಿಎಎ, ಶಹೀನ್‌ಬಾಗ್ ಬಗ್ಗೆ ಕೇಜ್ರಿವಾಲ್ ಅವರದ್ದುಮೌನವೇ ಉತ್ತರವಾಗಿತ್ತು. ಬಿಜೆಪಿಯು ಈ ಬಾರಿಯೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಕಣಕ್ಕಿಳಿದು ಸೋಲುಂಡಿತು.
ಫಲಿತಾಂಶದ ಬಳಿಕ ಪಕ್ಷ ನಾಯಕರ ಮಾತಿನ ವರಸೆ ಬದಲಾಗಿದೆ. ‘ಸತತ ಐದು ಬಾರಿ ಅಧಿಕಾರ ಹಿಡಿಯುವ ಯತ್ನ ವಿಫಲವಾಗಿದೆ ಎಂದರೆ, ಮತದಾರರ ನಿರೀಕ್ಷೆಯನ್ನು ನಾವು ತಲುಪುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಮಿಶ್ರಾ ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಪ್ರತಿನಿಧಿಸುವ ಪ್ರಸಿದ್ಧ ಮುಖಗಳ ಕೊರತೆಯನ್ನು ಪಕ್ಷ ನೀಗಿಸಬೇಕಿದೆ.ರಾಜಕೀಯವನ್ನು ಮರು ವ್ಯಾಖ್ಯಾನಿಸಲು ಈ ಫಲಿತಾಂಶ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.
ಕೈಹಿಡಿಯದ ‘ಶಾಹೀನ್‌ಬಾಗ್’
ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಗೃಹಸಚಿವ ಅಮಿತ್ ಶಾ ಅವರಿಂದ ಆರಂಭಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರೆಗೆ ಎಲ್ಲರೂ ‘ಶಾಹೀನ್‌ಬಾಗ್ ಪ್ರತಿಭಟನೆ’ಯನ್ನೇ ಕೇಂದ್ರವಾಗಿಟ್ಟುಕೊಂಡು ಪ್ರಚಾರ ನಡೆಸಿದ್ದರು.
22 ವರ್ಷಗಳ ಅಂತರದ ಬಳಿಕ ದೆಹಲಿಯ ಗದ್ದುಗೆ ಹಿಡಿಯಲು ಈ ಪ್ರತಿಭಟನೆ ಆಸರೆಯಾಗಬಹುದು ಎಂಬ ಬಿಜೆಪಿಯ ಲೆಕ್ಕಾಚಾರವು ಸಂಪೂರ್ಣವಾಗಿ ಕೈಕೊಟ್ಟಿದೆ. ಈ ಕ್ಷೇತ್ರದ (ಓಖಲಾ) ಎಎಪಿ ಅಭ್ಯರ್ಥಿ ಅಮಾನತ್‌ಉಲ್ಲಾ ಖಾನ್ ಅವರು ಚುನಾವಣೆಯಲ್ಲಿ ಗೆದ್ದಿದ್ದಷ್ಟೇ ಅಲ್ಲ ಕಳೆದ ಬಾರಿಗಿಂತ ಹೆಚ್ಚಿನ ಅಂತರದ ಗೆಲುವು ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.