ADVERTISEMENT

ಮನೆ ಜಪ್ತಿ ನೋಟಿಸ್‌ ಬಂದ ಗಂಟೆಗಳಲ್ಲಿ ಭಾರಿ ಮೊತ್ತದ ಲಾಟರಿ ಗೆದ್ದ ಮೀನು ವ್ಯಾಪಾರಿ

ಪಿಟಿಐ
Published 14 ಅಕ್ಟೋಬರ್ 2022, 11:08 IST
Last Updated 14 ಅಕ್ಟೋಬರ್ 2022, 11:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಲ್ಲಂ: ಸಾಲ ಮರುಪಾವತಿಸದ ಕೇರಳದ ಮೀನು ವ್ಯಾಪಾರಿಯೊಬ್ಬರ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್‌ವೊಂದು ನೋಟಿಸ್‌ ನೀಡಿದ ಕೆಲವೇ ಗಂಟೆಗಳಲ್ಲಿ ವ್ಯಾಪಾರಿಗೆ 70 ಲಕ್ಷ ಮೊತ್ತದ ಲಾಟರಿ ಹೊಡೆದಿದೆ. ರಾಜ್ಯ ಸರ್ಕಾರದ ₹70 ಲಕ್ಷಗಳ ಅಕ್ಷಯ ಲಾಟರಿಯನ್ನು ಗೆದ್ದಿರುವ ಮೀನು ವ್ಯಾಪಾರಿ ಕುಟುಂಬ ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಪೂಕುಂಜು ಅವರು ಅಕ್ಟೋಬರ್ 12 ರಂದು ಎಂದಿನಂತೆ ತಮ್ಮ ದಿನಚರಿ ಆರಂಭಿಸಿದ್ದರು. ಮೀನುಗಳನ್ನು ತಂದು ಮಾರಲು ಚೀಲ ಹಿಡಿದು ಹೊರಟ ಪೂಕುಂಜು ಅವರು ದಾರಿ ಮಧ್ಯೆ ‘ಅಕ್ಷಯ ಲಾಟರಿ’ ಟಿಕೆಟ್ ಖರೀದಿಸಿದ್ದರು. ಅದರ ಮೊದಲ ಬಹುಮಾನ ₹70 ಲಕ್ಷಗಳಾಗಿದ್ದವು. ಲಾಟರಿ ಟಿಕೆಟ್‌ ಹಿಡಿದು ಮನೆಗೆ ಬಂದ ಪೂಕುಂಜು ಅವರಿಗೆ ಆಘಾತ ಕಾದಿತ್ತು. ₹9 ಲಕ್ಷ ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಅವರ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್‌ ನೋಟಿಸ್‌ ಕಳುಹಿಸಿತ್ತು.

‘ಬ್ಯಾಂಕ್‌ನಿಂದ ನೋಟಿಸ್ ಬಂದ ನಂತರ ನಾವು ಕಂಗಾಲಾಗಿದ್ದೆವು. ಏನು ಮಾಡಬೇಕೆಂದು ನಮಗೆ ತಿಳಿದಿರಲಿಲ್ಲ. ನಮ್ಮ ಆಸ್ತಿಯನ್ನು ಮಾರಾಟ ಮಾಡಬೇಕೆ ಎಂಬ ಆತಂಕದಲ್ಲಿದ್ದೆವು. ನಮಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಹುಡುಗ ಮತ್ತು ಹುಡುಗಿ. ಇಬ್ಬರೂ ಓದುತ್ತಿದ್ದಾರೆ’ ಎಂದು ಪೂಕುಂಜು ಅವರ ಪತ್ನಿ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಲಾಟರಿಯ ವಿಜೇತ ಸಂಖ್ಯೆಯನ್ನು ಘೋಷಿಸಲಾಯಿತು. ಅದರಲ್ಲಿ ನನಗೆ ಪ್ರಥಮ ಬಹುಮಾನ ಲಭಿಸಿತ್ತು’ ಎಂದು ಪೂಕುಂಜು ಅವರು ಸಂತಸದೊಂದಿಗೆ ಹೇಳಿಕೊಂಡಿದ್ದಾರೆ.

ಈ ಲಾಟರಿ ಗೆಲ್ಲುವುದಕ್ಕೂ ಒಂದು ದಿನ ಮೊದಲು ₹5,000 ಬಹುಮಾನ ಕೇವಲ ಎರಡು ಸಂಖ್ಯೆಗಳಿಂದ ಕೈತಪ್ಪಿ ಹೋಗಿತ್ತು ಎಂದು ಪೂಕುಂಜು ಪತ್ನಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಲಾಟರಿ ಗೆದ್ದಿರುವ ಪೂಕುಂಜು ಕುಟುಂಬ ಮುಂದಿನ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ. ಮೊದಲು ಎಲ್ಲಾ ಸಾಲಗಳನ್ನು ತೀರಿಸುವುದಾಗಿಯೂ, ನಂತರ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹಣ ಮೀಸಲಿಡುವುದಾಗಿಯೂ ಕುಟುಂಬ ತಿಳಿಸಿದೆ.

ಇದಕ್ಕೂ ಮೊದಲು ಕೇರಳ ಸರ್ಕಾರದ ಓಣಂ ಬಂಪರ್‌ ಲಾಟರಿ ಟಿಕೆಟ್‌ ಖರೀದಿಸಿದ್ದ ತಿರುವನಂತಪುರ ಆಟೊ ಚಾಲಕ ಅನೂಪ್‌ ಅವರಿಗೆ ಪ್ರಥಮ ಬಹುಮಾನವಾಗಿ ₹25 ಕೋಟಿ ಲಭಿಸಿತ್ತು.

ಅದರೆ ಬಹುಮಾನದಿಂದ ಭ್ರಮನಿರಸನಗೊಂಡಿದ್ದ ಆಟೊ ಚಾಲಕ ಅನೂಪ್‌, ಯಾಕಾದರೂ ಬಹುಮಾನ ಗೆದ್ದೆನೋ ಎಂದು ನೋವು ತೋಡಿಕೊಂಡಿದ್ದರು.

‘ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಮಗನಿಗೆ ಹುಷಾರಿಲ್ಲ. ಆದರೂ ನನಗೆ ಆತನ ಜೊತೆ ಇರಲು ಆಗುತ್ತಿಲ್ಲ. ಲಾಟರಿಯನ್ನು ಗೆದ್ದಾಗ ನನಗೆ ಭಾರಿ ಸಂತೋಷವಾಗಿತ್ತು. ಆದರೆ ಈಗ, ಯಾಕಾದರೂ ಗೆದ್ದೆನೊ ಎನ್ನಿಸುತ್ತಿದೆ’ ಎಂದಿದ್ದರು.

ದೊಡ್ಡ ಮೊತ್ತದ ಬಹುಮಾನ ಗೆದ್ದ ಅನೂಪ್‌ ಅವರ ಮನೆ ಮುಂದೆ ಸಕ್ಕರೆಗೆ ಇರುವೆ ಮುತ್ತಿದಂತೆ ದುಡ್ಡಿನ ಸಹಾಯ ಕೇಳಿ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಅನೂಪ್‌ ಅವರು ಮನೆಯಿಂದ ಓಡಿಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.