ಇಂದೋರ್: ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಎಸಗಿದ ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ಆ ಬಾಲಕಿಯ ತಂದೆ ಒತ್ತಾಯಿಸಿದ್ದಾರೆ. ಆರೋಪಿ ಎಸಗಿರುವ ಅಪರಾಧಕ್ಕೆ ಮರಣದಂಡನೆಯೊಂದೇ ಏಕೈಕ ಆಯ್ಕೆ ಎಂದು ಹೇಳಿದ್ದಾರೆ.
‘ನಾನು ಯಾವುದೇ ಪರಿಹಾರವನ್ನು ಬಯಸುವುದಿಲ್ಲ, ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಬಯಸುತ್ತೇನೆ’ ಎಂದು ಬಾಲಕಿಯ ತಂದೆ ಭಾನುವಾರ ಹೇಳಿದ್ದಾರೆ.
ಎರಡನೆ ತರಗತಿ ವಿದ್ಯಾರ್ಥಿನಿ ಮಂಗಳವಾರ ಶಾಲೆಯ ಹೊರಗೆ ಪೋಷಕರಿಗಾಗಿ ಕಾಯುತ್ತಾ ನಿಂತಿದ್ದ ವೇಳೆ ಇರ್ಫಾನ್ ಮತ್ತು ಆಸಿಫ್ ಎಂಬಿಬ್ಬರು ಬಾಲಕಿಯನ್ನು ಕರೆದೊಯ್ದಿದ್ದಾರೆ. ಶಾಲೆಯಿಂದ ಅನತಿ ದೂರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಗಾಯಗೊಳಿಸಿ ಬಿಟ್ಟು ಹೋಗಿದ್ದರು.
ಶಾಲೆಯಿಂದ 700 ಮೀಟರ್‌ಗಳಷ್ಟು ದೂರಲ್ಲಿ ಬಾಲಕಿ ಬಿದ್ದಿದ್ದು ಕಂಡು ಬಂದಿದ್ದು, ಬದುಕುಳಿದಿದ್ದಳು. ಆದರೆ, ಆ ಬಾಲಕಿ ಬದುಕಿಗಾಗಿ ಹೋರಾಡುತ್ತಿದ್ದಾಳೆ.
ಪ್ರಕರಣ ಸಂಬಂಧ ಸಿ.ಸಿ ಟಿ.ವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಬುಧವಾರ ಪ್ರಥಮ ಆರೋಪಿ ಇರ್ಫಾನ್ ಖಾನ್‌ನನ್ನು ಬಂಧಿಸಿದ್ದಾರೆ. ಎರಡನೇ ಶಂಕಿತ ಆರೋಪಿ ಆಸಿಫ್‌ನನ್ನು ಶುಕ್ರವಾರ ಬಂಧಿಸಲಾಗಿದೆ.
ಬಾಲಕಿ ಗಾಯಗೊಂಡಿರುವ ಸುದ್ದಿ ಹರಡುತ್ತಿದ್ದಂತೆ ಮಂದಸೌರ್‌ನ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಪೊಲೀಸರು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದರು.
ನ್ಯಾಯಾಲಯದಲ್ಲಿ ಔಪಚಾರಿಕವಾಗಿ ಆರೋಪಗಳನ್ನು ಸಲ್ಲಿಸುವ ಮೊದಲು ತನಿಖಾಧಿಕಾರಿಗಳು ಬಾಲಕಿಯ ಜತೆ ಮಾತನಾಡಲು ಕಾಯುತ್ತಿದ್ದಾರೆ ಎಂದು ಮಂದಸೌರ್‌ನ ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಸಿಂಗ್ ಅವರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಬಾಲಕಿಯ ತಂದೆಯ ಖಾತೆಗೆ ₹5 ಲಕ್ಷವನ್ನು ವರ್ಗಾಯಿಸಲಾಗಿದೆ ಎಂದು ಸರ್ಕಾರ ಹೇಳಿದೆ.
‘ಮುಖ್ಯಮಂತ್ರಿ ಅವರು ಸಂತ್ರಸ್ತ ಬಾಲಕಿಯ ತಂದೆಯ ಖಾತೆಗೆ ₹5 ಲಕ್ಷ ವರ್ಗಾಯಿಸಿದ್ದಾರೆ. ಪೊಲೀಸರು ಶೀಘ್ರದಲ್ಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ರಾಜ್ಯ ಸರ್ಕಾರ ಬಾಲಕಿಯ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ನೋಡಿಕೊಳ್ಳಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಅರ್ಚನಾ ಚಿತ್ನಿಸ್ ಹೇಳಿದ್ದಾರೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.
ಸಿಬಿಐ ತನಿಖೆಗೆ ಒತ್ತಾಯ
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆರೋಪಿಯೊಬ್ಬರ ತಾಯಿ ಒತ್ತಾಯಿಸಿದ್ದಾರೆ.
‘ಅವರು ಅಮಾಯಕರು ಎಂದು ನಾನು ಭಾವಿಸಿದ್ದೇನೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಅವರು ತಪ್ಪಿತಸ್ಥರು ಎಂದು ಸಾಬೀತಾದರೆ ಅವರನ್ನು ಕಠಿಣ ಶೀಕ್ಷೆಗೊಳಪಡಿಸಬೇಕು’ ಎಂದು ಆರೋಪಿಯ ತಾಯಿ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ನಡೆಸಲು ಶನಿವಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.