ಬಿಹಾರ: 2020ರ ಗಲ್ವಾನ್ ಕಣಿವೆ ಘರ್ಷಣೆಯಲ್ಲಿ ಚೀನಾ ಸೇನೆಯ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಯೋಧನ ಸ್ಮಾರಕ ನಿರ್ಮಾಣ ಮಾಡಿದ್ದ ತಂದೆಯನ್ನು ಪೊಲೀಸರು ಥಳಿಸಿ, ಬಂಧಿಸಿದ ಘಟನೆ ಇಲ್ಲಿನ ವೈಶಾಲಿಯಲ್ಲಿ ನಡೆದಿದೆ.
ಹುತಾತ್ಮ ಯೋಧ ಜೈ ಕಿಶೋರ್ ಸಿಂಗ್ ಅವರ ತಂದೆ ಸರ್ಕಾರಿ ಭೂಮಿಯಲ್ಲಿ ತಮ್ಮ ಮಗನ ಸ್ಮಾರಕ ನಿರ್ಮಿಸಿದ್ದರು. ಭೂ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಥಳಿಸಿ, ಬಂಧಿಸಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
‘ಡಿಎಸ್‌ಪಿ ಮಾ’ಮ್ ಸ್ಥಳಕ್ಕೆ ಭೇಟಿ ನೀಡಿ 15 ದಿನದೊಳಗೆ ಸ್ಮಾರಕ ತೆರವುಗೊಳಿಸುವಂತೆ ಹೇಳಿದ್ದರು. ನಂತರ ಪೊಲೀಸ್ ಠಾಣೆ ಮುಖ್ಯಸ್ಥರು ಮನೆಗೆ ಭೇಟಿ ನೀಡಿ ತಮ್ಮ ತಂದೆಯನ್ನು ಬಂಧಿಸಿದ್ದಾರೆ ಮತ್ತು ಥಳಿಸಿದ್ದಾರೆ’ ಎಂದು ಸಿಂಗ್ ಸಹೋದರ ಎಎನ್‌ಐಗೆ ತಿಳಿಸಿದ್ದಾರೆ. ಸಿಂಗ್ ಸಹೋದರ ಕೂಡ ಸೇನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಈ ಪ್ರಕರಣವು ವೈಶಾಲಿಯ ಜಂಡಹಾದಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿದೆ. ಜನವರಿಯಲ್ಲಿ, ಹರಿನಾಥ ರಾಮ ಅವರ ಜಾಗದಲ್ಲಿ ಮತ್ತು ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ಸ್ಮಾರಕ ನಿರ್ಮಣ ಮಾಡಿದ್ದಕ್ಕೆ ಎಸ್‌ಸಿ / ಎಸ್‌ಟಿ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ನಂತರ, ಸ್ಮಾರಕದ ಗಡಿಗೆ ಗೋಡೆಗಳನ್ನು ಹಾಕಲಾಗಿತ್ತು. ಅಕ್ರಮ ಒತ್ತುವರಿ ಮಾಡಿ ಭೂಮಾಲೀಕರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ’ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಮಹುವಾ ಅವರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
2020ರ ಜೂನ್‌ನಲ್ಲಿ ಲಡಾಕ್‌ನ ಗಡಿರೇಖೆ ಗಲ್ವಾನ್ ಕಣಿವೆಯಲ್ಲಿ ಚೀನಾ ವಿರುದ್ಧ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅವರಲ್ಲಿ ಜೈ ಕಿಶೋರ್ ಸಿಂಗ್ ಕೂಡ ಒಬ್ಬರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.