ADVERTISEMENT

ತಂದೆಯ ಮೊಬೈಲ್, ಬ್ಯಾಗ್ ಕಳ್ಳತನ ಮಾಡಿದ್ದವನನ್ನು Google Map ಸಹಾಯದಿಂದ ಹಿಡಿದ ಮಗ

ತಮಿಳುನಾಡಿನ ರಾಜಭಗತ್ ಪಳನಿಸ್ವಾಮಿ ಎಂಬ ಟೆಕಿ ಈ ಕೆಲಸ ಮಾಡಿದವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2024, 6:41 IST
Last Updated 5 ಫೆಬ್ರುವರಿ 2024, 6:41 IST
<div class="paragraphs"><p>ರಾಜಭಗತ್ ಅವರು ಹಂಚಿಕೊಂಡಿರುವ ಕಳ್ಳನ ಚಿತ್ರ ಹಾಗೂ ಗೂಗಲ್ ಮ್ಯಾಪ್</p></div>

ರಾಜಭಗತ್ ಅವರು ಹಂಚಿಕೊಂಡಿರುವ ಕಳ್ಳನ ಚಿತ್ರ ಹಾಗೂ ಗೂಗಲ್ ಮ್ಯಾಪ್

   

X

ಬೆಂಗಳೂರು: ರೈಲಿನಲ್ಲಿ ತಂದೆಯ ಬ್ಯಾಗ್ ಹಾಗೂ ಮೊಬೈಲ್ ಕದ್ದೊಯ್ದಿದ್ದ ಕಳ್ಳನೊಬ್ಬನನ್ನು ಮೊಬೈಲ್ ಕಳೆದುಕೊಂಡವರ ಮಗ, ಗೂಗಲ್ ಮ್ಯಾಪ್ (Google Map) ಸಹಾಯದಿಂದ ಪತ್ತೆಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.

ADVERTISEMENT

ತಮಿಳುನಾಡಿನ ರಾಜಭಗತ್ ಪಳನಿಸ್ವಾಮಿ ಎಂಬ ಟೆಕಿ ಈ ಕೆಲಸ ಮಾಡಿದವರು.

ರಾಜಭಗತ್ ಅವರ ತಂದೆ ಕಳೆದ ಭಾನುವಾರ ತಮಿಳುನಾಡಿನ ಕನ್ಯಾಕುಮಾರಿ ಬಳಿ ನಾಗರ್‌ಕೋಯಿಲ್‌ನಿಂದ ಕಾಚಿಗುಡ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಿರುಚನಾಪಳ್ಳಿಗೆ ತೆರಳುತ್ತಿದ್ದರು. ಬೆಳಿಗ್ಗೆ 1.15ರ ಸುಮಾರು ನಾಗರ್‌ಕೋಯಿಲ್‌ನಲ್ಲಿ ರೈಲು ಹತ್ತಿದ್ದರು.

ಬೆಳಗಿನ ಜಾವ 3.51 ರ ಸುಮಾರು ತಿರುನಲ್ವೇಲಿ ಜಂಕ್ಸನ್‌ನಲ್ಲಿ ರಾಜಭಗತ್ ಅವರ ತಂದೆ ಫೋನ್ ಹಾಗೂ ಬ್ಯಾಗ್ ಕಳೆದುಕೊಂಡಿದ್ದರು. ಈ ವಿಷಯವನ್ನು ಅವರು ಬೇರೊಬ್ಬರ ಮೊಬೈಲ್‌ ಸಹಾಯದಿಂದ ಮಗ ರಾಜಭಗತ್‌ಗೆ ತಿಳಿಸಿದ್ದರು.

ಕೂಡಲೇ ಎಚ್ಚೆತ್ತುಕೊಂಡ ರಾಜಭಗತ್, ಗೂಗಲ್ ಮ್ಯಾಪ್ ಸಹಾಯದಿಂದ ತಂದೆಯ ಮೊಬೈಲ್ ಅನ್ನು ಟ್ರ್ಯಾಕ್ ಮಾಡಿದ್ದಾರೆ. ಕಳ್ಳ ಫೋನ್ ಹಾಗೂ ಬ್ಯಾಗ್ ಎತ್ತಿಕೊಂಡು ತಿರುನಲ್ವೇಲಿ ನಿಲ್ದಾಣದಲ್ಲಿ ಇಳಿದು ವಾಪಸ್ ನಾಗರ್‌ಕೋಯಿಲ್‌ಗೆ ಇನ್ನೊಂದು ರೈಲಿನಲ್ಲಿ ತೆರಳುತ್ತಿದ್ದ.

ಕೂಡಲೇ ತಿರುಚನಾಪಳ್ಳಿಯಿಂದ ನಾಗರ್‌ಕೋಯಿಲ್‌ಗೆ ತೆರಳಿದ ರಾಜಭಗತ್ ಅವರು, ರೈಲ್ವೆ ಪೊಲೀಸರ ಹಾಗೂ ಅಲ್ಲಿನ ಸ್ಥಳೀಯ ಸ್ನೇಹಿತನ ಸಹಾಯದಿಂದ ಗೂಗಲ್ ಮ್ಯಾಪ್ ಆಧರಿಸಿ ಕಳ್ಳನ ಬೆನ್ನು ಬಿದ್ದರು. ನಾಗರ್‌ಕೋಯಿಲ್ ರೈಲು ನಿಲ್ದಾಣದಲ್ಲಿ ಕಳ್ಳ ಇನ್ನೇನು ಸಿಕ್ಕಿಬಿದ್ದ ಅನ್ನುವಷ್ಟರಲ್ಲಿ ಹೆಚ್ಚಿನ ಜನಸಂದಣಿ ಇದ್ದಿದ್ದರಿಂದ ಆತ ಬಸ್ ಹತ್ತಿ ಹೋಗಿದ್ದ. ಮತ್ತೆ ಬೆನ್ನು ಬಿದ್ದ ರಾಜಭಗತ್, ‘ಅಣ್ಣಾ ಬಸ್ ನಿಲ್ದಾಣ’ದ ಬಳಿ ಹೋದಾಗ ಕಳ್ಳ ಸಿಕ್ಕಿ ಬಿದ್ದ.

ಕೂಡಲೇ ರಾಜಭಗತ್ ಅವರು ಸ್ಥಳೀಯರ ನೆರವಿನಿಂದ ಕಳ್ಳನನ್ನು ಹಿಡಿದು ಪರಿಶೀಲಿಸಿದಾಗ ಅವರ ತಂದೆಯ ಮೊಬೈಲ್ ಹಾಗೂ ಬ್ಯಾಗ್ ಮತ್ತು ಬ್ಯಾಗ್‌ನಲ್ಲಿದ್ದ ₹1000 ಸಿಕ್ಕಿತು.

ಈ ವಿಷಯವನ್ನು ರಾಜಭಗತ್ ಅವರು ತಮ್ಮ X ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದ್ದು ಗೂಗಲ್ ಮ್ಯಾಪ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಅವರು ಕಳ್ಳನ ವಿರುದ್ಧ ದೂರು ದಾಖಲಿಸಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

'ಅದೃಷ್ಟವಶಾತ್ ನಮ್ಮ ತಂದೆ ಫೋನ್ ಸ್ವಿಚ್ ಆಫ್ ಆಗಿರಲಿಲ್ಲ. ಏಕೆಂದರೆ ಇತ್ತೀಚೆಗೆ ಆಂಡ್ರಾಯ್ಡ್‌ ಹಾಗೂ ಐಒಎಸ್ ಮೊಬೈಲ್‌ಗಳಲ್ಲಿ ಪವರ್ ಬಟನ್ ಅನ್ನು ಬಳಸಿಕೊಂಡು ಸ್ವಿಚ್ ಆಫ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ' ಎಂದು ರಾಜಭಗತ್ ಹೇಳಿದ್ದಾರೆ.

ರಾಜಭಗತ್ ಅವರು ಸಿವಿಲ್ ಎಂಜಿನಿಯರ್ ಸಹ ಹೌದು. ತಾವು ವಿಶೇಷವಾಗಿ ನಕ್ಷೆ ತಜ್ಞನಾಗಿದ್ದು, ನಕ್ಷೆ ವಿಷಯವಾಗಿ ಪೊನ್ನಿಯನ್ ಸೆಲ್ವನ್ ಸಿನಿಮಾಕ್ಕೆ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರಿಗೆ X ನಲ್ಲಿ 45 ಸಾವಿರಕ್ಕೂ ಹೆಚ್ಚು ಜನ ಫಾಲೋವರ್‌ಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.