ನವದೆಹಲಿ: ಭಾರತೀಯ ಆಹಾರ ನಿಗಮದಲ್ಲಿ (ಎಫ್‌ಸಿಐ) ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿಬಿಐ ಬುಧವಾರ ‘ಆಪರೇಷನ್ ಕನಕ್’ ಆರಂಭಿಸಿದ್ದು, ಚಂಡೀಗಢದ ಡಿಜಿಎಂ ದರ್ಜೆ ಅಧಿಕಾರಿಯನ್ನು ಬಂಧಿಸಿದ ನಂತರ ಪಂಜಾಬ್, ಹರಿಯಾಣ ಮತ್ತು ದೆಹಲಿಯ 50 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು, ಅಕ್ಕಿ ಗಿರಣಿ ಮಾಲೀಕರು ಮತ್ತು ಮಧ್ಯವರ್ತಿಗಳ ಸಿಂಡಿಕೇಟ್‌ನಲ್ಲಿರುವ ಶಂಕಿತರನ್ನು ಗುರುತಿಸಲು ಆರು ತಿಂಗಳು ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಎಫ್‌ಸಿಐ ಕಾರ್ಯನಿರ್ವಾಹಕ ನಿರ್ದೇಶಕ ಸುದೀಪ್ ಸಿಂಗ್ ಸೇರಿದಂತೆ ಒಟ್ಟು 74 ಆರೋಪಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ರವೀಂದರ್ ಸಿಂಗ್ ಖೇರಾ ಎಂಬಾತನಿಂದ ₹ 50,000 ಲಂಚ ಪಡೆದ ಆರೋಪದ ಮೇಲೆ ಎಫ್‌ಸಿಐನ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ರಾಜೀವ್ ಕುಮಾರ್ ಮಿಶ್ರಾ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಎಫ್‌ಸಿಐಗೆ ‘ಬೇನಾಮಿ’ ಗೋದಾಮುಗಳನ್ನು ನಡೆಸಲು ಹೊರಗುತ್ತಿಗೆ ನೀಡಿದ ಪಂಜಾಬ್ ಸರ್ಕಾರದ ಹಿರಿಯ ಅಧಿಕಾರಿಗಳ ಪಾತ್ರವನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
74 ಆರೋಪಿಗಳ ಪೈಕಿ 34 ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಮೂವರು ನಿವೃತ್ತರು, 17 ಖಾಸಗಿ ವ್ಯಕ್ತಿಗಳು ಮತ್ತು 20 ಸಂಸ್ಥೆಗಳು. ವಾಷಿಂಗ್ ಮಷಿನ್‌ನಲ್ಲಿ ಮಹಿಳಾ ಅಧಿಕಾರಿ ಬಚ್ಚಿಟ್ಟಿದ್ದ ₹ 10 ಲಕ್ಷ ಸೇರಿದಂತೆ ₹ 80 ಲಕ್ಷ ನಗದು ಸಿಬಿಐ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.