ADVERTISEMENT

ವ್ಯಾಪಾರ, ಉದ್ಯೋಗ ನಷ್ಟ ಭೀತಿ: ವೈಷ್ಣೋದೇವಿ ರೋಪ್‌ವೇ ವಿರೋಧಿಸಿ ಧರಣಿ, ಗಲಭೆ

ಪಿಟಿಐ
Published 25 ನವೆಂಬರ್ 2024, 14:30 IST
Last Updated 25 ನವೆಂಬರ್ 2024, 14:30 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರದಲ್ಲಿ ರಿಯಾಸಿ ಜಿಲ್ಲೆಯ ಕಾತ್ರಾದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು</p></div>

ಜಮ್ಮು ಮತ್ತು ಕಾಶ್ಮೀರದಲ್ಲಿ ರಿಯಾಸಿ ಜಿಲ್ಲೆಯ ಕಾತ್ರಾದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು

   

ಪಿಟಿಐ ಚಿತ್ರ

ಕಾತ್ರಾ: ಹಿಮಾಲಯದ ತಪ್ಪಲಿನಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ತೆರಳಲು ರೋಪ್‌ವೇ ಮಾರ್ಗ ಯೋಜನೆಯಿಂದ ವ್ಯಾಪಾರ ಹಾಗೂ ಉದ್ಯೋಗ ನಷ್ಟವಾಗಲಿದೆ ಎಂದು ಆರೋಪಿಸಿ ವರ್ತಕರು, ಯಾತ್ರಿಗಳನ್ನು ಬೆಟ್ಟಕ್ಕೆ ಕರೆದೊಯ್ಯುವವರು ಹಾಗೂ ನೌಕರರು ಪೊಲೀಸರ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. 

ADVERTISEMENT

ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಕಾತ್ರಾದಲ್ಲಿ ಪ್ರತಿಭಟನೆ ನಡೆದಿದೆ. ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಗಳ ಅನುಕೂಲಕ್ಕಾಗಿ ₹250 ಕೋಟಿ ವೆಚ್ಚದಲ್ಲಿ ರೋಪ್‌ವೇ ನಿರ್ಮಿಸುವ ಯೋಜನೆಯನ್ನು ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯು ಸಿದ್ಧಪಡಿಸಿದೆ. ಇದರಿಂದ ಬೇಸ ಕ್ಯಾಂಪ್‌ನಿಂದ ವೈಷ್ಣೋದೇವಿಗೆ ಕೇವಲ 6 ನಿಮಿಷಗಳಲ್ಲಿ ತಲುಪಲು ಸಾಧ್ಯ ಎಂದೆನ್ನಲಾಗಿದೆ. ಇದರಿಂದ ವಯಸ್ಸಾದವರು ಹಾಗೂ ನಡೆಯಲು ಹಾಗೂ ಬೆಟ್ಟ ಹತ್ತಲು ಸಾಧ್ಯವಾಗದವರಿಗೆ ಪ್ರಯೋಜನವಾಗಲಿದೆ ಎಂದು ಮಂಡಳಿ ಹೇಳಿದೆ.

ಆದರೆ ಈ ಯೋಜನೆಯಿಂದ ದೇವಾಲಯಕ್ಕೆ ಬರುವ ಯಾತ್ರಿಗಳನ್ನೇ ನಂಬಿಕೊಂಡ ಹಲವು ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ. 

ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ‘ಭಾರತ್ ಮಾತಾ ಕೀ ಜೈ’ ಘೋಷಣೆ ಮೂಲಕ ಧರಣಿ ಆರಂಭಿಸಿದರು. ಈ ಯೋಜನೆಯು ಸದ್ಯ ಇರುವ ಮಾರ್ಗವನ್ನು ಬದಲಿಸಲಿದೆ. ಆದರೆ ಹತ್ತಾರು ವರ್ಷಗಳಿಂದ ಇದೇ ಮಾರ್ಗದಿಂದ ಹಲವು ಕುಟುಂಬಗಳು ಬದುಕುತ್ತಿವೆ. ಹೀಗಾಗಿ ಈ ಯೋಜನೆ ಕಾರ್ಯಗತವಾಗಲು ಬಿಡುವುದಿಲ್ಲ. ಕಳೆದ ಮೂರು ವರ್ಷಗಳಿಂದ ಇದನ್ನು ತಡೆಯಲು ನಿರಂತರವಾಗಿ ಹೋರಾಡಿಕೊಂಡು ಬರಲಾಗುತ್ತಿದೆ. ಯೋಜನೆ ಕೈಬಿಡುವ ಭರವಸೆ ನೀಡಲಾಗಿತ್ತು. ಆದರೆ ಈಗ ಇದರ ಜಾರಿಗೆ ಸರ್ಕಾರ ಮುಂದಾಗಿದೆ’ ಎಂದು ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಪ್ರಭಾತ್ ಸಿಂಗ್ ಆರೋಪಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಕೇಂದ್ರೀಯ ಮೀಸಲು ಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಪ್ರತಿಭಟನಾಕಾರರು ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ವಾಹನಗಳು ಜಖಂಗೊಂಡಿವೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಸಿಆರ್‌ಪಿಎಫ್‌ ಯೋಧರ ಮೇಲೂ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.

‘ಕಾತ್ರಾದಲ್ಲಿರುವ ಬಸ್ ನಿಲ್ದಾಣ ಸ್ತಬ್ಧಗೊಂಡಿದೆ. ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ. ಆದರೂ ನಿಭಾಯಿಸುತ್ತಿದ್ದೇವೆ. ಪ್ರತಿಭಟನಾಕಾರರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಪರಮವೀರ್ ಸಿಂಗ್‌ ತಿಳಿಸಿದ್ದಾರೆ.

ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ‘ಪ್ರತಿಭಟನಾಕಾರರ ಮನವಿಯನ್ನೂ ಆಲಿಸಲಾಗುವುದು. ಈ ಕುರಿತು ಮಂಡಳಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ’ ಎಂದಿದ್ದಾರೆ. 

ವೈಷ್ಣೋದೇವಿ ದೇಗುಲಕ್ಕೆ ಪ್ರತಿ ವರ್ಷ ಸುಮಾರು 80 ಲಕ್ಷ ಯಾತ್ರಿಗಳು ಭೇಟಿ ನೀಡುತ್ತಾರೆ. ದೇವಾಲಯ ತಲುಪಲು ಸದ್ಯ ಕಡಿದಾದ ಮಾರ್ಗದಲ್ಲಿ 13 ಕಿ.ಮೀ. ಸಾಗಬೇಕಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.