ನವದೆಹಲಿ: ದೇಶದ ರಾಷ್ಟ್ರೀಯ ಉದ್ಯಾನಗಳ ಸಮೀಪದಲ್ಲಿ ಸಂಗೀತ ಉತ್ಸವ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಬಹುದೇ ಎಂಬ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ರೂಪಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ಆದೇಶಿಸಿದೆ.
ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದ ಸಮೀಪದಲ್ಲಿ 2017ರಿಂದ ಸಂಗೀತ ಉತ್ಸವ ನಡೆಸಲಾಗುತ್ತಿದೆ. ಈ ಉತ್ಸವದಿಂದ ವನ್ಯಜೀವಿಗಳಿಗೆ ತೊಂದರೆ ಆಗುತ್ತಿದೆ ಎಂದು ಪರಿಸರ ಹೋರಾಟಗಾರರು ಆರೋಪಿಸಿದ್ದರು. ಈ ಬಗ್ಗೆ ಎನ್‌ಜಿಟಿ ಪೀಠವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಆದೇಶ ಹೊರಡಿಸಿರುವ ಪೀಠವು, ಒಂದು ತಿಂಗಳಲ್ಲಿ ಮಾರ್ಗಸೂಚಿ ರೂಪಿಸಬೇಕು ಎಂದು ಹೇಳಿದೆ.
ಕರ್ನಾಟಕದಲ್ಲೂ ವಿವಾದ: ಅರಣ್ಯ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕದಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆಯೋಜಿಸಲಾಗುತ್ತಿದೆ ಎಂದು ಆರೋಪಿಸಿವನ್ಯಜೀವಿ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಅವರು ಎನ್‌ಟಿಸಿಎಗೆ ಪತ್ರ ಬರೆದಿದ್ದರು. ಈ ಬಗ್ಗೆ ಶೀಘ್ರ ವರದಿ ಸಲ್ಲಿಸುವಂತೆ ಪ್ರಾಧಿಕಾರವುಅರಣ್ಯ ಇಲಾಖೆಗೆ ಈಚೆಗೆ ನಿರ್ದೇಶನ ನೀಡಿತ್ತು. ಜಾತ್ರಾ ಮಹೋತ್ಸವಕ್ಕೆ ಜಾನುವಾರು ಹಾಗೂ ಎತ್ತಿನಗಾಡಿಗಳ ಪ್ರವೇಶವನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.