ಶ್ರೀನಗರ: ಜಮ್ಮು–ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿರುವುದನ್ನು ಹೊಗಳಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರಾಡಳಿತ ಪ್ರದೇಶದಲ್ಲಿ ಜನತಂತ್ರ ಹಬ್ಬ ನಡೆಯುತ್ತಿದೆ ಎಂದು ಗುರುವಾರ ಹೇಳಿದ್ದಾರೆ.
ಶ್ರೀನಗರದಲ್ಲಿ ನಡೆದ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಜಮ್ಮು–ಕಾಶ್ಮೀರದ ಜನತೆ ಯಾವ ರೀತಿ ಗಟ್ಟಿಗೊಳಿಸುತ್ತಿದ್ದಾರೆ ಎಂಬುದನ್ನು ಜಗತ್ತು ಗಮನಿಸುತ್ತಿದೆ’ ಎಂದರು.
‘ಈ ಹಿಂದಿನ ದಿನಗಳಲ್ಲಿ ಕಾಶ್ಮೀರದ ಯುವ ಜನತೆ ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸುತ್ತಿದ್ದರು. ಈಗ ಕಾಲ ಬದಲಾಗಿದ್ದು, ಇಲ್ಲಿನ ಬೀದಿಗಳಲ್ಲಿ ಅವರು ಕೈಯಲ್ಲಿ ಪುಸ್ತಕಗಳು ಮತ್ತು ಲೇಖನಿಗಳೊಂದಿಗೆ ಓಡಾಡುತ್ತಿದ್ದಾರೆ’ ಎಂದು ಮೋದಿ ಹೇಳಿದರು.
‘ಜನರು ಭಾರಿ ಸಂಖ್ಯೆಯಲ್ಲಿ ಬಂದು ಮತದಾನ ಮಾಡುತ್ತಿದ್ದು, ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ವಿದ್ಯಮಾನವು ಜಮ್ಮು–ಕಾಶ್ಮೀರ ಜನರ ಉನ್ನತ ಆಶೋತ್ತರಗಳನ್ನು ತೋರಿಸುತ್ತದೆ’ ಎಂದರು.
‘ಈ ಹಿಂದೆ ಪ್ರಚಾರ ಕಾರ್ಯ ಸಂಜೆ 6ಕ್ಕೆ ಕೊನೆಗೊಳ್ಳುತ್ತಿತ್ತು. ಮನೆಮನೆಗೆ ತೆರಳಿ ಪ್ರಚಾರ ನಡೆಸುವುದು ಸಾಧ್ಯವೇ ಇರಲಿಲ್ಲ. ಈಗ, ರಾತ್ರಿಯೂ ಪ್ರಚಾರ ನಡೆಯುತ್ತಿದ್ದು, ಜನರು ಪ್ರಜಾತಂತ್ರವನ್ನು ಸಂಭ್ರಮಿಸುತ್ತಿದ್ದಾರೆ’ ಎಂದು ಹೇಳಿದರು.
ಸೆ.25ರಂದು ನಡೆಯಲಿರುವ ಎರಡನೇ ಹಂತದ ಮತದಾನ ಸಂದರ್ಭದಲ್ಲಿಯೂ ದಾಖಲೆ ಪ್ರಮಾಣದಲ್ಲಿ ಹಕ್ಕು ಚಲಾಯಿಸುವಂತೆ ಅವರು ಮನವಿ ಮಾಡಿದರು.
ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ಜಮ್ಮು–ಕಾಶ್ಮೀರ ಜನತೆಯಲ್ಲಿ ವಿಶ್ವಾಸ ಮರುಸ್ಥಾಪನೆಗೊಂಡಿದ್ದು ಐದು ವರ್ಷಗಳಲ್ಲಿ ಇಲ್ಲಿನ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.–ನರೇಂದ್ರ ಮೋದಿ, ಪ್ರಧಾನಿ
ಮೋದಿ ಭಾಷಣದ ಪ್ರಮುಖ ಅಂಶಗಳು
ದೆಹಲಿ ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ರೈಲು ಸಂಚಾರ ಶೀಘ್ರವೇ ಆರಂಭಗೊಳ್ಳಲಿದೆ
ಜಿ–20 ಶೃಂಗಸಭೆ ಕಾರುಗಳ ರೇಸ್ ಯೋಗ ದಿನ ಆಚರಣೆ ಕಾಶ್ಮೀರಿಗರಲ್ಲಿನ ಉತ್ಸಾಹವನ್ನು ತೋರಿಸುತ್ತವೆ
ರಾಷ್ಟ್ರ ಧ್ವಜಾರೋಹಣ ಮಾಡುವವರಿಗೆ ಶ್ರೀನಗರದ ಲಾಲ್ ಚೌಕ್ ಒಂದು ಕಾಲಕ್ಕೆ ಅಪಾಯಕಾರಿ ಸ್ಥಳವೆನಿಸಿತ್ತು. ಕೇಂದ್ರದ ಮಾಜಿ ಗೃಹ ಸಚಿವ ಕಾಂಗ್ರೆಸ್ ನಾಯಕ ಸುನೀಲಕುಮಾರ್ ಶಿಂದೆ ಕೂಡ ಈ ಮಾತು ಹೇಳಿದ್ದಾರೆ. ಈಗ ಪರಿಸ್ಥಿತಿ ಬದಲಾಗಿದೆ
ಮೂರು ಕುಟುಂಬಗಳ ರಾಜಕಾರಣದಿಂದಾಗಿ ಕಾಶ್ಮೀರಿ ಪಂಡಿತರು ನೋವು ಅನುಭವಿವಂತಾಗಿದೆ. ಸಿಖ್ಖರು ತುಳಿತಕ್ಕೆ ಒಳಗಾಗುವಲ್ಲಿಯೂ ಈ ಕುಟುಂಬಗಳ ಪಾತ್ರವಿದೆ
ಕಾಂಗ್ರೆಸ್ ಎನ್‌ಸಿ ಪಿಡಿಪಿ ವಿರುದ್ಧ ವಾಗ್ದಾಳಿ
ಶ್ರೀನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ವಿರುದ್ಧ ವಾಗ್ದಾಳಿ ನಡೆಸಿದರು. ‘ಈ ಮೂರು ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಜಮ್ಮು–ಕಾಶ್ಮೀರದ ಯುವ ಜನತೆಯನ್ನು ಕಲ್ಲು ತೂರಾಟದಲ್ಲಿ ತೊಡಗುವಂತೆ ಮಾಡಿ ಅವರ ದಾರಿ ತಪ್ಪಿಸಿದ್ದರು. ಮುಂದಿನ ಪೀಳಿಗೆಯನ್ನು ಈ ಪಕ್ಷಗಳು ಮತ್ತೆ ಅಪಾಯಕ್ಕೆ ದೂಡಲು ನಾನು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
‘ಈ ಪಕ್ಷಗಳು ತಮ್ಮ ಲಾಭಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ‘ಕಾಶ್ಮೀರಿತನ’ವನ್ನು ದುರ್ಬಲಗೊಳಿಸಿದ್ದವು’ ಎಂದು ಟೀಕಿಸಿದ ಮೋದಿ ‘1980ರಲ್ಲಿ ಇವರು ಏನು ಮಾಡಿದ್ದರು ಎಂಬುದು ನಿಮಗೆ ಗೊತ್ತೇ’ ಎಂದು ಪ್ರಶ್ನಿಸಿದರು.
‘ಜಮ್ಮು ಮತ್ತು ಕಾಶ್ಮೀರದ ರಾಜಕಾರಣದ ಮೇಲೆ ತಮ್ಮದೇ ಸಂಪೂರ್ಣ ಅಧಿಕಾರ ಎನ್ನುವಂತೆ ವರ್ತಿಸಿದ್ದರು. ಹೊರರಾಜ್ಯದವರು ಯಾರೂ ಇಲ್ಲಿಗೆ ಬರದಂತೆ ತಡೆದಿದ್ದರು. ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಾಕೆ ನಡೆಸುತ್ತಿರಲಿಲ್ಲ’ ಎಂದೂ ಪ್ರಶ್ನಿಸಿದರು.
ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷಗಳು ಅಣೆಕಟ್ಟೆ ಗಳನ್ನು ಕಟ್ಟುವ ಧೈರ್ಯ ತೋರಲಿಲ್ಲ. ಹೀಗಾಗಿ, ಇಲ್ಲಿನ ನದಿಗಳ ನೀರು ಏಳು ದಶಕಗಳ ಕಾಲ ಗಡಿಯಾಚೆಗೆ ಹರಿಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ವೈಷ್ಣೋದೇವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಎನ್‌ಸಿ ಹಾಗೂ ಕಾಂಗ್ರೆಸ್ ಅಣೆಕಟ್ಟೆಗಳನ್ನು ನಿರ್ಮಿಸುವ ಧೈರ್ಯ ತೋರಿದ್ದಲ್ಲಿ, ಜಮ್ಮು–ಕಾಶ್ಮೀರ ರೈತರಿಗೆ ಅನುಕೂಲವಾಗುತ್ತಿತ್ತು ಎಂದರು.
‘ಶಹಾಪುರ ಕಂಡಿ ಅಣೆಕಟ್ಟೆ ಯೋಜನೆ ಹಲವು ವರ್ಷಗಳ ಕಾಲ ನನೆಗುದಿಗೆ ಬಿದ್ದಿತ್ತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರದಿದ್ದಲ್ಲಿ ಕಠುವಾ ಮತ್ತು ಸಾಂಬಾ ಜಿಲ್ಲೆಗಳ ರೈತರ ಬದುಕು ಹಸನಾಗುತ್ತಿದ್ದಿಲ್ಲ’ ಎಂದರು.
‘ಚೆನಾಬ್ ನದಿಗೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪ್ರಸ್ತಾವ ಮುಂದಿಟ್ಟಿತ್ತು. ಆದರೆ, ಕಾಂಗ್ರೆಸ್ ಮತ್ತು ಎನ್‌ಸಿ ಈ ಯೋಜನೆ ಕುರಿತ ಕಡತವನ್ನು ನಿರ್ಲಕ್ಷಿಸಿದ್ದರು’ ಎಂದು ಟೀಕಿಸಿದರು.
ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಶೀತಲ್ ಮತ್ತು ರಾಕೇಶ್ ಹೆಸರು ಪ್ರಸ್ತಾಪಿಸಿದ ಮೋದಿ, ಈ ಕ್ರೀಡಾಪಟುಗಳ ಯಶಸ್ಸಿನಲ್ಲಿ ಕಟ್ರಾ ಪಾತ್ರ ದೊಡ್ಡದಿದೆ ಎಂದು ಹೊಗಳಿದರು.
ವಾಗ್ದಾಳಿ: ಶ್ರೀನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ವಿರುದ್ಧ ವಾಗ್ದಾಳಿ ನಡೆಸಿದರು.
‘ಈ ಮೂರು ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಜಮ್ಮು–ಕಾಶ್ಮೀರದ ಯುವ ಜನತೆಯನ್ನು ಕಲ್ಲು ತೂರಾಟದಲ್ಲಿ ತೊಡಗುವಂತೆ ಮಾಡಿ, ಅವರ ದಾರಿ ತಪ್ಪಿಸಿದ್ದರು. ಈ ಪಕ್ಷಗಳು ಮುಂದಿನ ಪೀಳಿಗೆಯನ್ನು ಮತ್ತೆ ಅಪಾಯಕ್ಕೆ ದೂಡಲು ನಾನು ಅವಕಾಶ ನೀಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.