ADVERTISEMENT

‘ಗೇಟ್‌ವೇ ಆಫ್‌ ಇಂಡಿಯಾ’ದ ಮೇಲ್ಮೈನಲ್ಲಿ ಬಿರುಕು: ಲೋಕಸಭೆಗೆ ಕೇಂದ್ರದ ಮಾಹಿತಿ

ಪಿಟಿಐ
Published 4 ಏಪ್ರಿಲ್ 2023, 4:13 IST
Last Updated 4 ಏಪ್ರಿಲ್ 2023, 4:13 IST
ಮುಂಬೈನ ಗೇಟ್‌ವೇ ಅಫ್‌ ಇಂಡಿಯಾ
ಮುಂಬೈನ ಗೇಟ್‌ವೇ ಅಫ್‌ ಇಂಡಿಯಾ   

ನವದೆಹಲಿ: ಮುಂಬೈನ 'ಗೇಟ್‌ವೇ ಆಫ್ ಇಂಡಿಯಾ'ದ ಮೇಲ್ಮೈಯಲ್ಲಿ ಕೆಲವು ಬಿರುಕುಗಳು ಮೂಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಆದರೆ, ಒಟ್ಟಾರೆ ರಚನೆಯು ಉತ್ತಮ ಸ್ಥಿತಿಯಲ್ಲಿದೆ ಎಂದು ಸರ್ಕಾರ ಸೋಮವಾರ ಸಂಸತ್‌ಗೆ ತಿಳಿಸಿದೆ.

ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಲಿಖಿತ ಪ್ರತಿಕ್ರಿಯೆಯಾಗಿ ಈ ವಿಷಯ ತಿಳಿಸಿದ್ದಾರೆ.

ಇತ್ತೀಚಿನ ಪರಿಶೀಲನೆಯ ವೇಳೆ ‘ಗೇಟ್‌ವೇ ಆಫ್ ಇಂಡಿಯಾ’ದ ಮುಂಭಾಗದಲ್ಲಿ ಬಿರುಕುಗಳೇನಾದರೂ ಕಂಡುಬಂದಿವೆಯೇ ಎಂದು ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಸಚಿವ ಕಿಶನ್‌ ರೆಡ್ಡಿ ‘ಮುಂಬೈನಲ್ಲಿರುವ ‘ಗೇಟ್‌ವೇ ಆಫ್ ಇಂಡಿಯಾ’ ಕೇಂದ್ರೀಯ-ರಕ್ಷಿತ ಸ್ಮಾರಕವಲ್ಲ. ಇದು ಮಹಾರಾಷ್ಟ್ರ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ರಕ್ಷಣೆಯಲ್ಲಿದೆ. ಪರಿಶೀಲನೆಯ ಸಮಯದಲ್ಲಿ ಅದರ ಮೇಲ್ಮೈಯಲ್ಲಿ ಕೆಲವು ಬಿರುಕುಗಳು ಕಂಡುಬಂದಿವೆ. ಆದರೆ, ಒಟ್ಟಾರೆ ರಚನೆಯು ಉತ್ತಮವಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಈ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಯೇ? ಅದರಲ್ಲಿನ ಪ್ರಮುಖ ಅಂಶಗಳೇನು? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ‘ಕೇಂದ್ರ ಸರ್ಕಾರಕ್ಕೆ ಯಾವುದೇ ವರದಿ ಬಂದಿಲ್ಲ’ ಎಂದು ಹೇಳಿದರು.

‘ಗೇಟ್‌ವೇ ಆಫ್‌ ಇಂಡಿಯಾ’ದ ಮರುಸ್ಥಾಪನೆ ಬಗ್ಗೆ ಮಹಾರಾಷ್ಟ್ರ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಯಾವುದೇ ಪ್ರಸ್ತಾವ ಬಂದಿಲ್ಲ’ ಎಂದು ಹೇಳಿದರು.

ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯು ‘ಗೇಟ್‌ವೇ ಆಫ್‌ ಇಂಡಿಯಾ’ದ ಸಂರಕ್ಷಣೆ ಮತ್ತು ದುರಸ್ತಿಗೆ ₹8.90 ಕೋಟಿ ಮೊತ್ತದ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದೆ. ಮಹಾರಾಷ್ಟ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರಗಳ ಇಲಾಖೆ ಮಾರ್ಚ್ 10 ರಂದು ಇದಕ್ಕೆ ಅನುಮೋದನೆಯನ್ನೂ ನೀಡಿದೆ ಎಂದು ಸಚಿವರು ತಿಳಿಸಿದರು.

ಬ್ರಿಟಿಷ್ ದೊರೆ ಐದನೇ ಕಿಂಗ್ ಜಾರ್ಜ್ ಆಗಮನದ ನೆನಪಿಗಾಗಿ 1911ರ ಡಿಸೆಂಬರ್‌ನಲ್ಲಿ ಗೇಟ್‌ವೇ ಆಫ್ ಇಂಡಿಯಾವನ್ನು ನಿರ್ಮಿಸಲಾಯಿತು. ಇದರ ನಿರ್ಮಾಣ ಕಾರ್ಯವು 1924 ರಲ್ಲಿ ಪೂರ್ಣಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.