ADVERTISEMENT

50 ವರ್ಷಗಳ ಹಿಂದೆ: ಬಚ್ಚಿಟ್ಟ 98 ಸಾವಿರ ಟನ್‌ ಆಹಾರಧಾನ್ಯ ಈ ವರ್ಷ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 21:13 IST
Last Updated 20 ನವೆಂಬರ್ 2024, 21:13 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

* ಬೇಕೆಂದೇ ಉತ್ಪಾದನೆ ಕುಗ್ಗಿಸುವ ಕೈಗಾರಿಕೆಗಳಿಗೆ ಪೈ ಎಚ್ಚರಿಕೆ

ನವದೆಹಲಿ, ನ. 20– ಲಾಭ ಕಡಿಮೆ ಎಂಬ ಕಾರಣದಿಂದ ಉತ್ಪಾದನೆಯನ್ನು ಬೇಕೆಂದೇ ಕಡಿತಗೊಳಿಸುವ ಕೈಗಾರಿಕೋದ್ಯಮಿಗಳಿಗೆ ಕೈಗಾರಿಕಾ ಸಚಿವ ಓ.ಎ.ಪೈ ಅವರು ಇಂದು ಲೋಕಸಭೆಯಲ್ಲಿ ಎಚ್ಚರಿಕೆ ನೀಡಿದರು.

ವಿದ್ಯುಚ್ಛಕ್ತಿ ಮತ್ತು ಕಚ್ಚಾವಸ್ತುಗಳ ಅಭಾವ ನೀಗಿಸುವ ಸರ್ಕಾರ ಎಲ್ಲ ಕ್ರಮಗಳನ್ನೂ ಮಾಡುವುದೆಂದು ಎಸ್‌.ಆರ್‌.ದಯನಿ ಅವರ ಉಪ ಪ್ರಶ್ನೆಗೆ ಉತ್ತರ ನೀಡುತ್ತಾ ತಿಳಿಸಿದರು.

ADVERTISEMENT

ಬಳಕೆದಾರರು ಬೆಲೆ ಏರಿಕೆ ವಿರೋಧಿಸುತ್ತಿದ್ದಾರೆಂಬ ಕಾರಣ ತಮ್ಮ ತಮ್ಮ ಉತ್ಪಾದನೆ ತಗ್ಗಿಸಕೂಡದೆಂದು ಸಚಿವರು ಕೈಗಾರಿಕೆಗಳಿಗೆ ಸೂಚಿಸಿದರು.

ಬೆಲೆಗಳು ಏರಿರುವಾಗ ಹೆಚ್ಚು ಲಾಭಗಳಿಸಿದ ಕೈಗಾರಿಕೆಗಳು ಈಗ ಬಳಕೆದಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಬೇಕಾಗಿಯೇ ಕುಂಠಿತಗೊಳಿಸದೆ, ಬೆಲೆಗಳನ್ನು ಇಳಿಸಿ ಉತ್ಪಾದನೆ ಹೆಚ್ಚಿಸುವುದರಿಂದ ಜನತೆಯ ಅಗತ್ಯ ಪೂರೈಸಬೇಕೆಂದು ಸಲಹೆ ನೀಡಿದರು.

ಬಚ್ಚಿಟ್ಟ 98 ಸಾವಿರ ಟನ್‌ ಆಹಾರಧಾನ್ಯ ಈ ವರ್ಷ ಪತ್ತೆ

ನವದೆಹಲಿ, ನ. 20– ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 98 ಸಾವಿರ ಟನ್ನುಗಳಷ್ಟು ಆಹಾರ ಧಾನ್ಯವನ್ನು ಈ ವರ್ಷ ಜನವರಿ ತಿಂಗಳಿನಿಂದ ರಾಜ್ಯ ಸರ್ಕಾರಗಳು ನಡೆಸಿದ 55 ಸಾವಿರ ದಾಳಿಗಳಲ್ಲಿ ಪತ್ತೆ ಮಾಡಿವೆಯೆಂದು ಕೃಷಿ ಖಾತೆ ರಾಜ್ಯ ಸಚಿವ ಎ.ಪಿ.ಶಿಂದೆ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.

ಆಹಾರ ಧಾನ್ಯಗಳನ್ನು ಬಚ್ಚಿಟ್ಟಿದ್ದಕ್ಕಾಗಿ ಮಿಸಾ ಅನ್ವಯ 375 ಮಂದಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಬಂಧಿಸಿದೆಯೆಂದೂ, ಇದೇ ಕಾರಣಕ್ಕಾಗಿ ಒರಿಸ್ಸಾದಲ್ಲಿ 17 ಮಂದಿ, ತಮಿಳುನಾಡಿನಲ್ಲಿ 18 ಮಂದಿಯನ್ನು ಬಂಧಿಸಲಾಗಿದೆಯೆಂದು ಶಿಂದೆ ಅವರು ಕೆ. ಚಂದ್ರಶೇಖರನ್‌ ಅವರಿಗೆ ಉತ್ತರವೀಯುತ್ತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.