ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಿದ್ದರೂ ಕೂಡ ಭಯೋತ್ಪಾದನೆ, ನುಸುಳುವಿಕೆ ಮತ್ತು ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸುವ ಪಿತೂರಿಗಳ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹುತಾತ್ಮರಾದ ಪೊಲೀಸರ ತ್ಯಾಗ ವ್ಯರ್ಥವಾಗುವುದಿಲ್ಲ. 20247ರ ಹೊತ್ತಿಗೆ ಭಾರತವು ಮುಂದುವರಿದ ರಾಷ್ಟ್ರವಾಗಲಿದೆ ಎಂದು ತಿಳಿಸಿದ್ದಾರೆ.
ಮಾದಕ ದ್ರವ್ಯ, ಸೈಬರ್ ಅಪರಾಧ, ಧಾರ್ಮಿಕ ಉದ್ವಿಗ್ನತೆ, ನುಸುಳುವಿಕೆ ಮತ್ತು ಭಯೋತ್ಪಾದನೆಯನ್ನು ಸೃಷ್ಟಿಸುವ ಪಿತೂರಿಯ ವಿರುದ್ಧ ಸವಾಲಿನ ಪರಿಸ್ಥಿತಿ ನಡುವೆಯೂ ನಮ್ಮ ಹೋರಾಟ ಮುಂದುವರಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ 36,438 ಪೊಲೀಸರು ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಕಳೆದ ವರ್ಷದಲ್ಲಿ ಸುಮಾರು 216 ಮಂದಿ ಹುತಾತ್ಮರಾಗಿದ್ದಾರೆ. ಹುತಾತ್ಮರಾದವರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ಎಂವ ಭರವಸೆಯನ್ನು ಅವರ ಕುಟುಂಬಗಳಿಗೆ ನೀಡುತ್ತೇನೆ ಎಂದು ಶಾ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ತೆಗೆದುಕೊಂಡ ಯೋಜನೆಗಳಿಗೆ ಮಾಹಿತಿ ನೀಡಿದ ಶಾ,'ಆಯುಷ್ಮಾನ್ ಸಿಎಪಿಎಫ್' ಯೋಜನೆಯಡಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದ್ದಾರೆ.
ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಆಧುನಿಕವಾಗಿದೆ ಹಾಗೂ ಪರಿಣಾಮಕಾರಿಯಾಗಿದೆ ಎಂದು ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.