ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: 2ನೇ ಹಂತದ ಮತದಾನದಲ್ಲಿ ಮಾರಾಮಾರಿ, ಇಬ್ಬರ ಸಾವು

ಟಿಎಂಸಿ–ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 1:14 IST
Last Updated 2 ಏಪ್ರಿಲ್ 2021, 1:14 IST
ಬೋಯಾಲ್‌ನ ಮತಗಟ್ಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಮತಾ ಮಾತನಾಡಿದರು ಪಿಟಿಐ ಚಿತ್ರ
ಬೋಯಾಲ್‌ನ ಮತಗಟ್ಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಮತಾ ಮಾತನಾಡಿದರು ಪಿಟಿಐ ಚಿತ್ರ   

ನಂದಿಗ್ರಾಮ (ಎಎಫ್‌ಪಿ/ಪಿಟಿಐ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಅಂಗವಾಗಿ, ಗುರುವಾರ ನಡೆದ ಎರಡನೇ ಹಂತದ ಮತದಾನದ ವೇಳೆ ರಾಜ್ಯದ ಹಲವೆಡೆ ಘರ್ಷಣೆ ನಡೆದಿದೆ. ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹಲವೆಡೆ ಮಾರಾಮಾರಿ ನಡೆದಿದೆ. ಘರ್ಷಣೆ ವೇಳೆ ಟಿಎಂಸಿಯ ಒಬ್ಬ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಬಿಜೆಪಿಯ ಒಬ್ಬ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಿಗ್ಗೆ 11ರ ನಂತರ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಬೋಯಾಲ್ ಪ್ರದೇಶದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಇದೇ ವೇಳೆ ಮತದಾನ ಎದುರಿಸುತ್ತಿರುವ ರಾಜ್ಯದ ಬೇರೆ ಕ್ಷೇತ್ರಗಳಲ್ಲೂ ಘರ್ಷಣೆ ನಡೆದಿದೆ ಎಂದು ಚುನಾವಣಾ ಆಯೋಗವು ಹೇಳಿದೆ.ನಕಲಿ ಮತದಾರರನ್ನು ಕರೆತಂದು ಮತದಾನ ಮಾಡಿಸಲಾಗುತ್ತಿದೆ ಎಂದು ಎರಡೂ ಪಕ್ಷಗಳು ಆರೋಪಿಸಿವೆ.

ಕೇಶ್ಪುರ ಕ್ಷೇತ್ರದಲ್ಲಿ ಬುಧವಾರ ತಡರಾತ್ರಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಆ ಘರ್ಷಣೆಯಲ್ಲಿ ಟಿಎಂಸಿಯ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ. ಈ ಸಂಬಂಧ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದೇ ಕಾರಣದಿಂದ ಗುರುವಾರ ಬೆಳಿಗ್ಗೆಯೂ ಘರ್ಷಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿಎಂಸಿ ಗೂಂಡಾಗಳು ಬೆದರಿಕೆ ಹಾಕಿದ್ದರು. ಹೀಗಾಗಿಯೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಕುಟುಂಬದವರು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮಮತಾ ಘೇರಾವ್ ಆಗಿಲ್ಲ’:ಬೋಯಾಲ್ ಮತಗಟ್ಟೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಘೇರಾವ್ ಮಾಡಲಾಗಿತ್ತು ಎಂಬುದು ಸುಳ್ಳು. ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆದರೆ, 930ರಷ್ಟು ಮತದಾರರು ಮಾತ್ರ ಇರುವ ಮತಗಟ್ಟೆ ಬಳಿ 3,000ಕ್ಕೂ ಹೆಚ್ಚು ಜನರು ಇದ್ದರು ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆಯ ಎರಡನೇ ಹಂತದ ಮತದಾನವು ಶಾಂತಿಯುತವಾಗಿಯೇ ನಡೆದಿದೆ ಎಂದು ಆಯೋಗವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.