ADVERTISEMENT

ಗಣರಾಜ್ಯ ದಿನ ಹಿಂಸಾಚಾರ: ಪಿ.ಪಿಗಳ ಸಮಿತಿ ರಚನೆ ಕುರಿತ ಕಡತ ಕೇಂದ್ರಕ್ಕೆ ರವಾನೆ

ಪಿಟಿಐ
Published 24 ಜುಲೈ 2021, 11:43 IST
Last Updated 24 ಜುಲೈ 2021, 11:43 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮತ್ತು ಲೆಫ್ಟಿನಂಟ್ ಗವರ್ನರ್ ಅನಿಲ್‌ ಬೈಜಲ್ (ಸಂಗ್ರಹ ಚಿತ್ರ)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮತ್ತು ಲೆಫ್ಟಿನಂಟ್ ಗವರ್ನರ್ ಅನಿಲ್‌ ಬೈಜಲ್ (ಸಂಗ್ರಹ ಚಿತ್ರ)   

ನವದೆಹಲಿ: ಗಣರಾಜ್ಯ ದಿನದಂದು ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರ (ಪಿ.ಪಿ) ಸಮಿತಿಯನ್ನು ರಚಿಸಬೇಕು ಎಂಬ ಬಗ್ಗೆ ದೆಹಲಿ ಸರ್ಕಾರದ ಸಚಿವ ಸಂಪುಟದ ತೀರ್ಮಾನವನ್ನು ಒಳಗೊಂಡ ಕಡತವನ್ನು ಲೆಫ್ಟಿನಂಟ್ ಗವರ್ನರ್ ಅವರ ಕಚೇರಿಯು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದೆ.

ಸಮಿತಿ ರಚಿಸಬೇಕು ಎಂಬ ಪೊಲೀಸ್ ಇಲಾಖೆ ಪ್ರಸ್ತಾವವನ್ನು ಸಚಿವ ಸಂಪುಟ ತಿರಸ್ಕರಿಸಿತ್ತು. ಈ ಬೆಳವಣಿಗೆಯು ಕೇಂದ್ರ ಸರ್ಕಾರ, ಲೆಫ್ಟಿನಂಟ್ ಗವರ್ನರ್ ಅನಿಲ್‌ ಬೈಜಲ್‌ ಜೊತೆಗೆ ದೆಹಲಿ ಸರ್ಕಾರದ ಇನ್ನೊಂದು ಸಂಘರ್ಷ ಎಂದು ಹೇಳಲಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಲೆಫ್ಟಿನಂಟ್ ಗವರ್ನರ್‌ ಮತ್ತು ಎಎಪಿ ಸರ್ಕಾರದ ನಡುವೆ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಈ ವಿಷಯವನ್ನು ರಾಷ್ಟ್ರಪತಿಗಳ ವಿವೇಚನೆಗೇ ಬಿಡಲಾಗಿದೆ. ಸಂಪುಟದ ತೀರ್ಮಾನಕ್ಕೆ ಸಂಬಂಧಿಸಿದ ಕಡತವನ್ನು ಗೃಹ ಸಚಿವಾಲಯಕ್ಕೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಿ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

ಪ್ರಕರಣದ ಗಂಭೀರತೆಯನ್ನು ಆಧರಿಸಿ ಗಣರಾಜ್ಯ ದಿನದ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿ 11 ಮಂದಿ ಮತ್ತು ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಬೇಕು ಎಂದು ಪೊಲೀಸ್ ಇಲಾಖೆಯು ಶಿಫಾರಸು ಮಾಡಿತ್ತು. ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳುವುದನ್ನು ಲೆಫ್ಟಿನಂಟ್‌ ಗವರ್ನರ್ ಅವರು ರಾಷ್ಟ್ರಪತಿಗಳ ವಿವೇಚನೆಗೇ ಬಿಟ್ಟಿರುವ ಮೊದಲ ಪ್ರಕರಣ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.