ನವದೆಹಲಿ: 'ತನಿಖೆಯ ಯಾವುದೋ ಒಂದು ಅಂಶವನ್ನು ಉಲ್ಲೇಖಿಸಿ, ಭಾಗಶಃ ದೋಷಾರೋಪ ಪಟ್ಟಿ ಸಲ್ಲಿಸುವುದು ಸಂವಿಧಾನದ 21ನೇ ವಿಧಿಗೆ ವಿರುದ್ಧವಾಗಿದ್ದು, ‘ಡಿಫಾಲ್ಟ್ ಜಾಮೀನು’ ಪಡೆಯಲು ಆರೋಪಿಯು ಹೊಂದಿರುವ ಹಕ್ಕನ್ನು ಕಸಿಯುತ್ತದೆ' ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭ್ರಷ್ಟಾಚಾರ ಆರೋಪದಡಿ ಸಿಬಿಐನಿಂದ ಬಂಧಿತರಾಗಿರುವ ಅವಿನಾಶ್ ಜೈನ್ ಎಂಬುವವರಿಗೆ ‘ಡಿಫಾಲ್ಟ್ ಜಾಮೀನು’ ನೀಡಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಅಮಿತ್ ಶರ್ಮಾ ಈ ಮಾತು ಹೇಳಿದರು.
ಪ್ರಾಸಿಕ್ಯೂಷನ್ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ, ಆರೋಪಿಯು ಕಾನೂನುಬದ್ಧವಾಗಿ ತಂತಾನೆ ಪಡೆಯಬಹುದಾದ ಜಾಮೀನಿಗೆ ‘ಡಿಫಾಲ್ಟ್ ಜಾಮೀನು’ ಎನ್ನಲಾಗುತ್ತದೆ.
‘ಆರೋಪಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಸಿಬಿಐ, ತನಿಖೆಯನ್ನೇ ಪೂರ್ಣಗೊಳಿಸಿಲ್ಲ. ಆದರೂ, ಅದು ದೋಷಾರೋಪ ಪಟ್ಟಿ ಸಲ್ಲಿಸಲು ಮುಂದಾಗಿದೆ’ ಎಂದು ಹೈಕೋರ್ಟ್ ಹೇಳಿದೆ.
ಆರೋಪಿ ಪರ ಹಿರಿಯ ವಕೀಲ ವಿಕಾಸ್ ಪಾಹ್ವಾ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.