ಭಾರತದ ಸಿನಿಮಾ ಕ್ಷೇತ್ರವು 2018ರಲ್ಲಿ ಶೇ 12ರಷ್ಟು ಬೆಳವಣಿಗೆ ಕಂಡಿದೆ. ಕ್ಷೇತ್ರದ ವರಮಾನವು ₹17,450 ಕೋಟಿಯಷ್ಟಿತ್ತು. 243 ಸಿನಿಮಾಗಳನ್ನು ನಿರ್ಮಿಸಿದ ಕನ್ನಡ ಚಿತ್ರರಂಗವು ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ. ಹಿಂದಿ ಮತ್ತು ತೆಲುಗು ಚಿತ್ರರಂಗಗಳು ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ.
ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿನಿಮಾಗಳು ಭಾರತದಲ್ಲಿ ನಿರ್ಮಾಣವಾಗಿವೆ. ಹಾಗಿದ್ದರೂ ಚೀನಾ ಅಥವಾ ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಸಿನಿಮಾ ಮಂದಿರಗಳ ಪ್ರಮಾಣ ಶೇ 25ರಷ್ಟು ಮಾತ್ರ. ದೇಶದಲ್ಲಿ ಒಟ್ಟು 9,601 ಸಿನಿಮಾ ಮಂದಿರಗಳಿವೆ. ಅವುಗಳ ಪೈಕಿ ಶೇ 47ರಷ್ಟು ದಕ್ಷಿಣದ ಐದು ರಾಜ್ಯಗಲ್ಲಿಯೇ ಇವೆ.
ಚೀನಾದಲ್ಲಿ ಪ್ರತಿ ವರ್ಷ ಸಿನಿಮಾ ಮಂದಿರಗಳ ಪ್ರಮಾಣವು ಶೇ 16ರಷ್ಟು ಏರಿಕೆಯಾಗುತ್ತಿದೆ. ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಸಿನಿಮಾ ಮಂದಿರಗಳು ಕಡಿಮೆ. ಎರಡು, ಮೂರು ಮತ್ತು ನಾಲ್ಕನೇ ಹಂತಗಳ ಪಟ್ಟಣಗಳಲ್ಲಿ ಸಿನಿಮಾ ನೋಡುವ ಹವ್ಯಾಸ ಕಡಿಮೆ ಇರುವುದು ಇದಕ್ಕೆ ಕಾರಣ ಎಂದು ಸಮೀಕ್ಷೆಯು ವಿವರಿಸಿದೆ. ಹಾಗಾಗಿ, ಭಾರತದಲ್ಲಿ ಸಿನಿಮಾ ಕ್ಷೇತ್ರದ ಪ್ರಗತಿಗೆ ಭಾರಿ ಅವಕಾಶ ಇದೆ ಎಂದು ಅಭಿಪ್ರಾಯಪಟ್ಟಿದೆ.
ಭಾರತದ ಹೊರಗೆ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ಸಿನಿಮಾಗಳಿಗೆ ಅತಿ ದೊಡ್ಡ ಮಾರುಕಟ್ಟೆ ಇದೆ. ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ, ಅಮೆರಿಕ ಮತ್ತು ಕೆನಡ ಇವೆ. ಆದರೆ, ವರಮಾನದ ದೃಷ್ಟಿಯಿಂದ ನೋಡಿದರೆ ಭಾರತೀಯ ಸಿನಿಮಾಗಳಿಗೆ ಚೀನಾ ಅತಿ ದೊಡ್ಡ ಮಾರುಕಟ್ಟೆ. 2018ರಲ್ಲಿ ಚೀನಾದಿಂದ ಸುಮಾರು ₹1800 ಕೋಟಿಯಷ್ಟು ವರಮಾನ ಬಂದಿದೆ.ದೇಶದಲ್ಲಿ ಏಕಪರದೆ ಮತ್ತು ಬಹುಪರದೆ ಸಿನಿಮಾ ಮಂದಿರಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ.
ಆಹಾರ ಸಬ್ಸಿಡಿ ಹೆಚ್ಚಳಕ್ಕೆ ಕಳವಳ
ಆಹಾರದ ಮೇಲೆ ಸರ್ಕಾರ ನೀಡುತ್ತಿರುವ ಸಹಾಯಧನದ (ಸಬ್ಸಿಡಿ) ಮೊತ್ತ ಹೆಚ್ಚುತ್ತಲೇ ಇರುವುದರ ಬಗ್ಗೆ ಆರ್ಥಿಕ ಸಮೀಕ್ಷೆಯು ಎಚ್ಚರಿಕೆ ನೀಡಿದೆ. ಸಹಾಯಧನ ವ್ಯವಸ್ಥೆಯನ್ನು ಮರುರೂಪಿಸಿ ಎಲ್ಲರಿಗೂ ಆಹಾರ ಸುರಕ್ಷತೆಯ ಖಾತರಿ ನೀಡಬೇಕು ಎಂದಿದೆ.
ಆಹಾರ ಸಹಾಯಧನವನ್ನು ಪುನರ್ ರೂಪಿಸುವ ಜತೆಗೆ ಆಹಾರ ನಿರ್ವಹಣೆಗೆ ತಂತ್ರಜ್ಞಾನದ ಬಳಕೆ ಹೆಚ್ಚಿಸಬೇಕು. ಈ ಮೂಲಕ ಎಲ್ಲರಿಗೂ ಆಹಾರ ಭದ್ರತೆಯ ಖಾತರಿ ಒದಗಿಸಬಹುದು ಎಂದು ಹೇಳಲಾಗಿದೆ.
ಇದೇ ಫೆಬ್ರುವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಆಹಾರ ಸಹಾಯಧನಕ್ಕಾಗಿ ₹1.84 ಲಕ್ಷ ಕೋಟಿ ಮೀಸಲು ಇರಿಸಲಾಗಿತ್ತು. ಅದಕ್ಕೂ ಹಿಂದಿನ ವರ್ಷದ ಬಜೆಟ್‌ನಲ್ಲಿ ಈ ಮೊತ್ತ ₹1.71 ಕೋಟಿ ಆಗಿತ್ತು.
ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಕೇಂದ್ರವು ಆಹಾರ ಧಾನ್ಯಗಳನ್ನು ಅತಿ ಕಡಿಮೆ ಬೆಲೆಗೆ ನೀಡುತ್ತಿದೆ. ಆದರೆ ಇದಕ್ಕೆ ಕೇಂದ್ರವು ಪಾವತಿಸಬೇಕಾದ ಮೊತ್ತ ಬಹಳ ಹೆಚ್ಚು. ಈ ಅಂತರ ಹೆಚ್ಚುತ್ತಲೇ ಇರುವುದು ಸಹಾಯಧನದ ಮೊತ್ತ ಏರಿಕೆ ಯಾಗಲು ಕಾರಣ. ಕೆ.ಜಿ.ಗೆ ₹1ರಿಂದ ₹3ರ ನಡುವಣ ದರದಲ್ಲಿ ಕೇಂದ್ರವು ಆಹಾರ ಧಾನ್ಯ ಪೂರೈಸುತ್ತಿದೆ. ಆದರೆ, ಒಂದು ಕೆ.ಜಿ. ಗೋಧಿಯ ಬೆಂಬಲ ಬೆಲೆ ಈಗ ₹24.35ರಷ್ಟಿದೆ. ಅಕ್ಕಿಗೆ ₹34.72ರಷ್ಟಿದೆ. ಬೆಂಬಲ ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ, ಫಲಾನುಭವಿಗಳು ಪಾವತಿಸಬೇಕಾದ ಮೊತ್ತ ಹೆಚ್ಚಿಸಲಾಗಿಲ್ಲ. 80 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಿದ್ದಾರೆ.
ದತ್ತಾಂಶ ಜನರಿಗೆ
ಸರ್ಕಾರವು ತನ್ನ ಬಳಿ ಇರುವ ಅಪಾರ ಪ್ರಮಾಣದ ದತ್ತಾಂಶವನ್ನು ಸಾರ್ವಜನಿಕ ಪ್ರಯೋಜನಕ್ಕೆ ಬಳಸಬೇಕು. ನಾಗರಿಕರಿಗೆ, ಮುಖ್ಯವಾಗಿ ಬಡವರಿಗೆ ಇದರಿಂದ ಫಲ ಸಿಗಬೇಕು ಎಂದು ಸಮೀಕ್ಷೆ ಸಲಹೆ ಕೊಟ್ಟಿದೆ.
ಸಾಮಾಜಿಕ ಆಸಕ್ತಿಯ ದತ್ತಾಂಶಗಳು ಜನರಿಂದಲೇ ಸೃಷ್ಟಿಯಾಗಿರುತ್ತವೆ. ಹಾಗಾಗಿ, ಅವು ‘ಜನರಿಂದ, ಜನರಿಗಾಗಿ, ಜನರ ದತ್ತಾಂಶ’. ಇದೇ ನೀತಿಯನ್ನು ಸರ್ಕಾರವೂ ಅನುಸರಿಸಬೇಕು.
‘ಇಂತಹ ದತ್ತಾಂಶಗಳು ಪೌರರ ಜೀವನವನ್ನು ಸುಲಲಿತಗೊಳಿಸಲು ಸರ್ಕಾರಕ್ಕೆ ನೆರವಾಗಬೇಕು; ಪುರಾವೆ ಆಧರಿಸಿದ ನೀತಿ ನಿರೂಪಣೆ ಸಾಧ್ಯವಾಗಿ, ಸಮಾಜ ಕಲ್ಯಾಣ ಯೋಜನೆಗಳು ಅರ್ಹರಿಗೆ ದೊರೆಯುವ ವ್ಯವಸ್ಥೆ ಮಾಡಲು ಇವುಗಳನ್ನು ಬಳಸಿಕೊಳ್ಳಬೇಕು. ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಹೆಚ್ಚಳಕ್ಕೂ ಇದು ಪೂರಕ’ ಎಂದು ಸಮೀಕ್ಷೆ ವಿವರಿಸಿದೆ.
ಜನರ ಆರೋಗ್ಯದ ದಾಖಲೆಗಳನ್ನು ಹೊಂದಿರುವ ರಾಷ್ಟ್ರೀಯ ಆರೋಗ್ಯ ರಿಜಿಸ್ಟ್ರಿಯ ಬಗ್ಗೆಯೂ ಸಮೀಕ್ಷೆ ಉಲ್ಲೇಖಿಸಿದೆ. ಈ ದತ್ತಾಂಶದ ಖಾಸಗಿತನ ಸಂರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.