ತಿರುವನಂತಪುರ: ಹಿಮಾಚಲ ಪ್ರದೇಶದ ಪ್ರವಾಹಪೀಡಿತ ಛತ್ರು ಗ್ರಾಮದಲ್ಲಿ ಸಿಲುಕಿದ್ದ ಮಲಯಾಳಂ ಚಲನಚಿತ್ರ ನಟಿ ಮಂಜು ವಾರಿಯರ್ ಮತ್ತು ನಿರ್ದೇಶಕ ಸನಾಲ್ ಕುಮಾರ್ ಶಶಿಧರನ್ ಅವರನ್ನು ಒಳಗೊಂಡ ಸುಮಾರು 40 ಜನರಿರುವ ಚಿತ್ರ ತಂಡವನ್ನು ರಕ್ಷಿಸಲಾಗಿದೆ. ಚಿತ್ರ ತಂಡದವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ ಎಂದು ಹಿಮಾಚಲ ಪ್ರದೇಶ ಸರ್ಕಾರ ತಿಳಿಸಿದೆ.
ವಾರಿಯರ್ ಸೋಮವಾರ ರಾತ್ರಿ ಕುಟುಂಬದವರನ್ನು ಸ್ಯಾಟಲೈಟ್ ದೂರವಾಣಿ ಮೂಲಕ ಸಂಪರ್ಕಿಸಿದ ನಂತರ ವಿಷಯ ಬೆಳಕಿಗೆ ಬಂದಿತ್ತು. ಆತಂಕಕ್ಕೆ ಒಳಗಾದ ಕುಟುಂಬದವರು ಮಂಗಳವಾರ ಅಧಿಕಾರಿಗಳ ಸಹಾಯ ಕೋರಿದ್ದರು.
ಇದನ್ನೂ ಓದಿ:ಹಿಮಾಚಲ ಪ್ರದೇಶ: ಭಾರಿ ಮಳೆಗೆ 22 ಸಾವು
ಇದೀಗ ಚಿತ್ರ ತಂಡದ ರಕ್ಷಣೆ ಕುರಿತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದು, ‘ನಟಿ ಮತ್ತು ತಂಡದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅವರಿಗೆ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಅಲ್ಲಿಗೆ ತೆರಳಿದ್ದರು’ ಎಂದು ತಿಳಿಸಿದ್ದಾರೆ.
ಛತ್ರು ಗ್ರಾಮ ಮನಾಲಿಯಿಂದ 80 ಕಿ.ಮೀ ದೂರದಲ್ಲಿದೆ. ಪ್ರವಾಹದಿಂದಾಗಿ ಚಿತ್ರ ತಂಡವನ್ನು ಸಂಪರ್ಕಿಸಲು ಆಗುತ್ತಿಲ್ಲ. ಆಹಾರ ದಾಸ್ತಾನು ಎರಡು ದಿನಗಳಿಗಷ್ಟೇ ಇದ್ದು, ಚಿತ್ರ ತಂಡದ ಜೊತೆ ಇನ್ನೂ 200 ಜನರು ಇದ್ದಾರೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್ ಅವರ ಸಹಾಯ ಕೋರಲಾಗಿದೆ ಎಂದು ಮಂಜು ಅವರ ಸಹೋದರ ಮಧು ವಾರಿಯರ್ ಹೇಳಿದ್ದರು.
ಮುರುಳೀಧರನ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ಸಹಾಯ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.