ಕೋಲ್ಕತ್ತ: ‘ಕೆಕೆ’ ಎಂದೇ ಖ್ಯಾತರಾಗಿದ್ದ, ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಮರಣೋತ್ತರ ಪರೀಕ್ಷೆ ಮತ್ತು ರಾಸಾಯನಿಕ ವಿಶ್ಲೇಷಣೆ ವರದಿಗಳು ಅಂತಿಮವಾಗಿ ಶನಿವಾರ ಕೋಲ್ಕತ್ತಾ ಪೊಲೀಸರ ಕೈಸೇರಿವೆ.
ಈ ಹಿಂದೆಯೇ ಹೇಳಿದಂತೆ, ಅವರ ಸಾವಿಗೆ 'ಮಯೋಕಾರ್ಡಿಯಲ್ ಇನ್ಫಾರ್ಕ್ಷನ್' ಎಂಬ ಹೃದಯ ಸಂಬಂಧಿ ತುರ್ತು ಸ್ಥಿತಿಯೇ ಕಾರಣ ಎಂದು ಎರಡೂ ವರದಿಗಳೂ ಹೇಳಿವೆ. ‘ಮಯೋಕಾರ್ಡಿಯಲ್ ಇನ್ಫಾರ್ಕ್ಷನ್’ ಎಂಬುದೂ ಒಂದು ಬಗೆಯ ಹೃದಯಾಘಾತವೇ ಎಂದು ವೈದ್ಯಕೀಯ ರಂಗ ಹೇಳುತ್ತದೆ.
‘ಕೊಬ್ಬಿನ ಶೇಖರಣೆಯಿಂದಾಗಿ ಕೆಕೆ ಹೃದಯದ ಅಪಧಮನಿಯ ಹಿಂಭಾಗದ ಸ್ನಾಯುಗಳು ಭಾರೀ ಪ್ರಮಾಣದಲ್ಲಿ ಸಂಕುಚಿತಗೊಂಡಿತ್ತು. ಹೀಗಾಗಿ ಹೃದಯದಿಂದ ರಕ್ತ ಪರಿಚಲನೆಯಾಗುವುದರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಅವರ ಪರಿಧಮನಿಯಲ್ಲೂ ಅಡಚಣೆಗಳಿದ್ದವು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಸಹಜ ಸಾವಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾಗಿ ಕೋಲ್ಕತ್ತಾ ಪೊಲೀಸರು ಈ ಹಿಂದೆ ಹೇಳಿದ್ದರು.
‘ಪ್ರಾಥಮಿಕ, ಅಂತಿಮ ಮರಣೋತ್ತರ ಪರೀಕ್ಷೆಯ ವರದಿಗಳು ಮತ್ತು ರಾಸಾಯನಿಕ ವಿಶ್ಲೇಷಣೆ ವರದಿಗಳು ಕೈ ಸೇರಿವೆ. ಅಸ್ವಾಭಾವಿಕ ಸಾವಿನ ವಾದವನ್ನು ಈಗ ತಳ್ಳಿಹಾಕಬಹುದು’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ‘ಐಎಎನ್‌ಎಸ್’ ವರದಿ ಮಾಡಿದೆ.
ಕಳೆದ ಮಂಗಳವಾರ ಸಂಜೆ ದಕ್ಷಿಣ ಕೋಲ್ಕತ್ತದ ನಜ್ರುಲ್ ಮಂಚ್‌ನಲ್ಲಿ ಕೆಕೆ ಸಂಗೀತ ಕಾರ್ಯಕ್ರಮ ನೀಡಿದ್ದರು. ಅದೇ ಅವರ ಕೊನೆಯ ಕಾರ್ಯಕ್ರಮವೂ ಆಗಿದೆ. ಆಗ ಕೆಕೆ ತಮ್ಮ ಅಸೌಖ್ಯದ ಬಗ್ಗೆ ಕಾರ್ಯಕ್ರಮ ಆಯೋಜಕರ ಬಳಿ ತಿಳಿಸಿದ್ದರು. ಬಟ್ಟೆಯಿಂದ ಪದೇಪದೆ ಮುಖ ಒರೆಸಿಕೊಳ್ಳುತ್ತಿದ್ದರು. ನಂತರ ತೆರೆ ಹಿಂದಿನ ವಿಶ್ರಾಂತಿ ಕೊಠಡಿಗೆ ಹೋಗಿದ್ದರು.
ಅವುಗಳು ಅಪಾಯದ ಮುನ್ಸೂಚನೆಗಳಾಗಿದ್ದವು ಎಂದು ವೈದ್ಯರು ಹೇಳಿದ್ದಾರೆ. ಕೆಕೆ ಮತ್ತು ಕಾರ್ಯಕ್ರಮದ ಆಯೋಜಕರು ಅಸೌಖ್ಯವನ್ನು ನಿರ್ಲಕ್ಷಿಸಿರಬಹುದು. ಒಂದು ವೇಳೆ ಕಾರ್ಯಕ್ರಮದಿಂದ ಕೆಕೆ ಹೊರಬಂದು ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಿದ್ದರೆ ಅಪಾಯ ತಪ್ಪಿಸಬಹುದಿತ್ತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.