ನವದೆಹಲಿ: ಈ ವರ್ಷದ ವಿವಾದಿತ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯ ಅಂತಿಮ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಇಂದು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಫಲಿತಾಂಶಗಳನ್ನು ಪ್ರಕಟಿಸಿದೆ.
ಭೌತವಿಜ್ಞಾನದ ನಿರ್ದಿಷ್ಟ ಪ್ರಶ್ನೆಯೊಂದಕ್ಕೆ ಎರಡು ಸರಿ ಉತ್ತರಗಳಿವೆ ಎಂದು ಎನ್‌ಟಿಎ ಹೇಳಿತ್ತು. ಆ ನಿರ್ದಿಷ್ಟ ಪ್ರಶ್ನೆಯ ಅಂಕಗಳನ್ನು ಗಣನೆಗೆ ತೆಗೆದುಕೊಂಡು, ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ‘ಮರು ಪರಿಷ್ಕರಿಸಿದ ಅಂಕಗಳ ವಿವರ ಇದೀಗ ಲಭ್ಯವಿದೆ’ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಟಾಪರ್ ಎಂದು ಘೋಷಿಸಲಾಗಿದ್ದ 67 ಅಭ್ಯರ್ಥಿಗಳಲ್ಲಿ 44 ಮಂದಿ ಭೌತವಿಜ್ಞಾನದ ಆ ನಿರ್ದಿಷ್ಟ ಪ್ರಶ್ನೆಗೆ ನೀಡಲಾದ ಅಂಕಗಳಿಂದಾಗಿ ಪೂರ್ಣ ಅಂಕಗಳನ್ನು ಗಳಿಸಿದ್ದಾರೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಮಯದ ನಷ್ಟ ಸರಿದೂಗಿಸಲು ಆರು ಅಭ್ಯರ್ಥಿಗಳಿಗೆ ನೀಡಲಾದ ಕೃಪಾಂಕಗಳನ್ನು ಏಜೆನ್ಸಿ ಹಿಂತೆಗೆದುಕೊಂಡ ನಂತರ ಟಾಪರ್‌ಗಳ ಸಂಖ್ಯೆ 61ಕ್ಕೆ ಇಳಿದಿದೆ.
ಮೇ 5ರಂದು ನಡೆದಿದ್ದ 2024ನೇ ಸಾಲಿನ ನೀಟ್-ಯುಜಿ ರದ್ದುಗೊಳಿಸಿ ಮರು ಪರೀಕ್ಷೆಗೆ ಆದೇಶಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು. ಪ್ರಶ್ನೆ ಪತ್ರಿಕೆ ವ್ಯವಸ್ಥಿತವಾಗಿ ಸೋರಿಕೆಯಾಗಿರುವುದಕ್ಕೆ ಯಾವುದೇ ದಾಖಲಿಗಳಿಲ್ಲ ಎಂದು ಹೇಳಿತ್ತು.
ನೀಟ್-ಯುಜಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಈವರೆಗೆ ಆರು ಎಫ್‌ಐಆರ್ ದಾಖಲಿಸಿದೆ.
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರೆ ಕೋರ್ಸ್‌ಗಳಿಗಾಗಿ ನೀಟ್-ಯುಜಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.