ನವದೆಹಲಿ: ಸೇಡಿನ ರಾಜಕಾರಣ ಬಿಟ್ಟು ಕೇಂದ್ರ ಸರ್ಕಾರ ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಅವರು ಈ ರೀತಿ ಹೇಳಿದ್ದಾರೆಯೇ? ಸರಿ, ಧನ್ಯವಾದಗಳು. ನಾನು ಅವರ ಹೇಳಿಕೆಯನ್ನು ಸ್ವೀಕರಿಸುವೆ. ಇದುವೇ ನನ್ನ ಉತ್ತರ ಎಂದಿದ್ದಾರೆ.
ದೇಶದಲ್ಲಿನ ಆರ್ಥಿಕ ಹಿಂಜರಿತಕ್ಕೆ ಕೇಂದ್ರ ಸರ್ಕಾರದ ಅವ್ಯವಸ್ಥೆಯೇ ಕಾರಣ. ಇದು ಮಾನವ ನಿರ್ಮಿತ ಬಿಕ್ಕಟ್ಟು ಎಂದು ಮನಮೋಹನ್ ಸಿಂಗ್ ಆರೋಪಿಸಿದ್ದರು.
ಮೋದಿ ಸರ್ಕಾರದ ನೀತಿಗಳು ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತದೆ.ಗ್ರಾಮೀಣ ಭಾರತ ಅತಿಯಾದ ಸಂಕಷ್ಟದಲ್ಲಿದೆ. ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಮತ್ತು ಗ್ರಾಮೀಣ ಆದಾಯ ಕುಸಿಯುತ್ತಿದೆ. ಕಡಿಮೆ ಹಣದುಬ್ಬರ ದರದಿಂದಾಗಿ ನಮ್ಮ ರೈತ ಮತ್ತು ಅವರ ಆದಾಯದ ಮೇಲೆ ಹೊಡೆತ ನೀಡಿದೆ ಎಂದು ಸಿಂಗ್ ಹೇಳಿದ್ದರು.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೆರಿಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ನಂತರ ನಿರ್ಮಲಾ ಸೀತಾರಾಮನ್ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ್ದಾರೆ.
ದೇಶದಲ್ಲಿ ಆರ್ಥಿಕ ಹಿಂಜರಿತ ಇದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪುತ್ತದೆಯೇ ಎಂದು ಮಾಧ್ಯಮದವರು ಕೇಳಿದಾಗ, ನಾನು ಉದ್ಯಮ ವಲಯದಲ್ಲಿರುವವರನ್ನುಭೇಟಿ ಮಾಡಿ ಅವರಿಂದ ಮಾಹಿತಿ ಪಡೆಯುತ್ತಿದ್ದೇನೆ.ಸರ್ಕಾರದಿಂದ ಅವರು ಏನು ಬಯಸುತ್ತಿದ್ದಾರೆ ಮತ್ತು ಅವರಸಲಹೆ ಏನು ಎಂಬುದರ ಬಗ್ಗೆಯೂ ಮಾತನಾಡುತ್ತಿದ್ದೇನೆ. ನಾನುಈಗಾಗಲೇ ಎರಡು ಬಾರಿ ಈ ಬಗ್ಗೆ ವಿವರಿಸಿದ್ದೇನೆ. ನಾನು ಎಷ್ಟು ಬಾರಿ ಬೇಕಾದರೂ ವಿವರಿಸಿ ಹೇಳುವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.