ನವದೆಹಲಿ: ಗಂಡಾಗಿ ಲಿಂಗ ಪರಿವರ್ತನೆಯಾಗಿರುವ ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್) ಹಿರಿಯ ಮಹಿಳಾ ಅಧಿಕಾರಿ ಎಂ. ಅನುಸೂಯ ಅವರಿಗೆ, ಸರ್ಕಾರಿ ದಾಖಲೆಗಳಲ್ಲಿ ತನ್ನ ಇಚ್ಛೆಯಂತೆ ಲಿಂಗ ಮತ್ತು ಹೆಸರು ನಮೂದಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ.
ಭಾರತೀಯ ನಾಗರಿಕ ಸೇವೆಯ ಇತಿಹಾಸದಲ್ಲಿಯೇ ಜರುಗಿದ ಮೊದಲ ಪ್ರಕರಣ ಇದಾಗಿದೆ.
ಅನುಸೂಯ ಅವರು, 2013ನೇ ಬ್ಯಾಚ್‌ನ ಐಆರ್‌ಎಸ್ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ಅಧಿಕಾರಿಯಾಗಿದ್ದಾರೆ. ಸದ್ಯ ಅವರು ಹೈದರಾಬಾದ್‌ನಲ್ಲಿರುವ ಮುಖ್ಯ ಆಯುಕ್ತರ ಕಚೇರಿಯ ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಸಿಇಎಸ್‌ಟಿಎಟಿ) ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ದಾಖಲೆಗಳಲ್ಲಿ ನನ್ನ ಹೆಸರನ್ನು ಅನುಕತಿರ್ ಸೂರ್ಯ ಆಗಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಮಹಿಳಾ ಕಾಲಂನಲ್ಲಿ ಪುರುಷನೆಂದು ನಮೂದಿಸಬೇಕು’ ಎಂದು ಮನವಿ ಸಲ್ಲಿಸಿದ್ದರು.
‘ಅನುಸೂಯ ಅವರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಲಾಗಿದೆ. ಇನ್ನು ಮುಂದೆ ಸರ್ಕಾರದ ದಾಖಲೆಗಳಲ್ಲಿ ಅವರ ಹೆಸರನ್ನು ಅಧಿಕೃತವಾಗಿ ಅನುಕತಿರ್ ಸೂರ್ಯ ಎಂಬುದಾಗಿ ನಮೂದಿಸಬಹುದಾಗಿದೆ’ ಎಂದು ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ತಿಳಿಸಿದೆ.
ಸೂರ್ಯ ಅವರು 2013ರ ಡಿಸೆಂಬರ್‌ನಿಂದ ಚೆನ್ನೈನಲ್ಲಿ ಸಹಾಯಕ ಆಯುಕ್ತರಾಗಿ ವೃತ್ತಿ ಆರಂಭಿಸಿದರು. 2018ರಲ್ಲಿ ಡೆಪ್ಯುಟಿ ಆಯುಕ್ತರಾಗಿ ಬಡ್ತಿ ಹೊಂದಿದರು. ಕಳೆದ ವರ್ಷ ಅವರು ಹೈದರಾಬಾದ್‌ಗೆ ವರ್ಗಾವಣೆಯಾಗಿದ್ದಾರೆ.
2010ರಲ್ಲಿ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯನಿಕೇಷನ್ ವಿಷಯದಲ್ಲಿ ಅವರು ಪದವಿ ಪಡೆದಿದ್ದಾರೆ. 2023ರಲ್ಲಿ ಭೋಪಾಲ್‌ನ ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ಯುನಿವರ್ಸಿಟಿಯಿಂದ ಸೈಬರ್ ಕಾನೂನು ಮತ್ತು ಸೈಬರ್ ವಿಧಿವಿಜ್ಞಾನ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.