ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್ ನಗರದ ಟಿಆರ್‌ಪಿ ಗೇಮ್ ಜೋನ್‌ನಲ್ಲಿ ಶನಿವಾರ ನಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ, ಆರು ಮಂದಿ ಪಾಲುದಾರರ ವಿರುದ್ಧ ಪೊಲೀಸರು ಭಾನುವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಅವರ ವಿರುದ್ದ ‘ಕೊಲ್ಲುವ ಉದ್ದೇಶ ಇಲ್ಲದಿದ್ದರೂ, ಜನರ ಸಾವಿಗೆ ಕಾರಣರಾದ ಆರೋಪ’ ಹೊರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಈ ಮನರಂಜನಾ ಕೇಂದ್ರಕ್ಕೆ ಸ್ಥಳೀಯ ಪೊಲೀಸರು 2023ರ ನವೆಂಬರ್‌ನಲ್ಲಿ ಅನುಮತಿ ನೀಡಿದ್ದರು. ಇದನ್ನು ಜನವರಿ 1ರಂದು ನವೀಕರಿಸಲಾಗಿತ್ತು ಎಂದು ರಾಜ್‌ಕೋಟ್ ಪೊಲೀಸ್ ಆಯುಕ್ತ ರಾಜು ಭಾರ್ಗವ ತಿಳಿಸಿದ್ದಾರೆ.
‘ಈ ಕೇಂದ್ರವು ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯಿಂದ ಅನುಮತಿ ಪಡೆದಿತ್ತು. ಅಗ್ನಿ ಸುರಕ್ಷತೆಯ ಬಗ್ಗೆ ನಿರಾಕ್ಷೇಪಣಾ ಪತ್ರ ಪಡೆಯಲು ಕೇಂದ್ರವು ತನ್ನಲ್ಲಿ ಅಗತ್ಯ ಸುರಕ್ಷತಾ ಉಪಕರಣಗಳು ಇವೆ ಎಂಬುದಕ್ಕೆ ಪುರಾವೆಗಳನ್ನು ಸಲ್ಲಿಸಿತ್ತು. ಆದರೆ ಈ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಅಗ್ನಿ ಅವಘಡಗಳ ಸಂದರ್ಭದಲ್ಲಿ ಬಳಕೆಯಾಗುವ ಸುರಕ್ಷತಾ ಉಪಕರಣಗಳು ಈ ಕೇಂದ್ರದಲ್ಲಿ ಇದ್ದವು. ಆದರೆ ಕೇಂದ್ರವು ಬೆಂಕಿ ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳು ಸಮರ್ಪಕವಾಗಿರದೆ ಇದ್ದುದು ದುರಂತಕ್ಕೆ ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳು 50 ಮೀಟರ್ ಅಗಲ, 60 ಮೀಟರ್ ಎತ್ತರದ ಕಟ್ಟಡವನ್ನು ಲೋಹದ ತಗಡು ಬಳಸಿ ನಿರ್ಮಿಸಿದ್ದರು. ಇಲ್ಲಿ ಈ ಗೇಮ್ ಜೋನ್‌ನ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಆರೋಪಿಗಳು ಸೂಕ್ತವಾದ ಅಗ್ನಿಶಾಮಕ ಉಪಕರಣಗಳನ್ನು ಹೊಂದಿರಲಿಲ್ಲ, ಸ್ಥಳೀಯ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿರಲಿಲ್ಲ. ಅಲ್ಲಿ ಅಗ್ನಿ ಅನಾಹುತ ಸಂಭವಿಸಿದರೆ ಜನ ಸಾಯುಬಹುದು ಎಂಬುದು ಗೊತ್ತಿದ್ದರೂ ಆರೋಪಿಗಳು ಜನರ ಜೀವವನ್ನು ಅಪಾಯಕ್ಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದ ಪ್ರಮುಖ ಬೆಳವಣಿಗೆಗಳು
‘ಟಿಆರ್‌ಪಿ ಜೇಮ್ ಜೋನ್’ ಅನ್ನು ನಡೆಸುತ್ತಿದ್ದ ರೇಸ್‌ವೇ ಎಂಟರ್‌ಪ್ರೈಸ್‌ನ ಪಾಲುದಾರ ಯುವರಾಜಸಿಂಹ ಸೋಲಂಕಿ, ಗೇಮ್ ಜೋನ್‌ನ ಮನರಂಜನಾ ವಿಭಾಗದ ವ್ಯವಸ್ಥಾಪಕ ನಿತಿನ್ ಜೈನ್ ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಧವಲ್ ಕಾರ್ಪೊರೇಷನ್‌ನ ಮಾಲೀಕ ಧವಲ್ ಥಕ್ಕರ್, ರೇಸ್‌ವೇ ಎಂಟರ್‌ಪ್ರೈಸ್‌ನ ಪಾಲುದಾರರಾದ ಅಶೋಕಸಿಂಹ ಜಡೇಜಾ, ಕಿರೀಟಸಿಂಹ ಜಡೇಜಾ, ಪ್ರಕಾಶ್‌ಚಂದ್ ಹಿರಾನ್, ಯುವರಾಜಸಿಂಹ ಸೋಲಂಕಿ, ರಾಹುಲ್ ರಾಥೋಡ್ ಅವರ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರೈಮ್ ಬ್ರ್ಯಾಂಚ್‌ನ ನಾಲ್ಕು ತಂಡ ರಚಿಸಲಾಗಿದೆ.
ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರ್ಯಾಂಚ್ ಮತ್ತು ರಾಜ್‌ಕೋಟ್ ಪೊಲೀಸರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಲಾಗಿದೆ.
ಅಲ್ಲದೆ, ಗುಜರಾತ್ ಸರ್ಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಐವರು ಸದಸ್ಯರ ಇನ್ನೊಂದು ಎಸ್‌ಐಟಿ ರಚಿಸಲು ಸೂಚಿಸಿದೆ.
ತ್ವರಿತ ತನಿಖೆಗೆ ನೆರವಾಗಲು ಗಾಂಧಿನಗರದಿಂದ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.