ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಅವರಿಗೆ ಕ್ರಿಮಿನಲ್ ಪ್ರಕರಣದಲ್ಲಿ ನೆರವಾಗುವಂತೆ ಲಂಚ ನೀಡಲು ಯತ್ನಿಸಿ, ಪರೋಕ್ಷ ಬೆದರಿಕೆಯೊಡ್ಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಅಮೃತಾ ಅವರು ನೀಡಿದ ದೂರು ಆಧರಿಸಿ, ವಸ್ತ್ರ ವಿನ್ಯಾಸಕಿ ಎನ್ನಲಾದ ಅನಿಕ್ಷಾ ಮತ್ತು ಆಕೆಯ ತಂದೆಯ ವಿರುದ್ಧ ಕಳೆದ ಫೆಬ್ರುವರಿ 20ರಂದು ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಇದೇ ವೇಳೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ‘ತಮ್ಮ ಪತ್ನಿ ಅಮೃತಾ ಅವರಿಗೆ ಲಂಚ ನೀಡಲು ಮತ್ತು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿರುವ ಸಂಬಂಧ ದಾಖಲಾದ ಪ್ರಕರಣದ ಬಗ್ಗೆ ಸೂಕ್ತ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ವಿಪಕ್ಷದ ನಾಯಕ ಅಜಿತ್ ಪವಾರ್ ಅವರು ವಿಧಾನಸಭೆಯಲ್ಲಿ ಧ್ವನಿ ಎತ್ತಿದಾಗ ಪ್ರತಿಕ್ರಿಯಿಸಿರುವ ಫಡಣವೀಸ್, ‘ಸುಮಾರು 14 ರಿಂದ 15 ಪ್ರಕರಣಗಳನ್ನು ಎದುರಿಸುತ್ತಿರುವ ಅನಿಲ್ ಜೈಸಿಂಘಾನಿ ಎಂಬಾತನ ಪುತ್ರಿ, ವಸ್ತ್ರ ವಿನ್ಯಾಸಕಿಯಾಗಿರುವ ಆ ಮಹಿಳೆ, ತನ್ನ ತಂದೆಯನ್ನು ಆ ಪ್ರಕರಣಗಳಿಂದ ಪಾರು ಮಾಡಿಸಲು ಆಮಿಷ ಮತ್ತು ಬೆದರಿಕೆಯ ಮಾರ್ಗ ಅನುಸರಿಸಿದ್ದಾಳೆ. ಆಕೆಯ ತಂದೆ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಯಲಿದೆ’ ಎಂದು ಸದನಕ್ಕೆ ಮಾಹಿತಿ ನೀಡಿದರು.
ಎಫ್‌ಐಆರ್‌ನಲ್ಲಿರುವ ಮಾಹಿತಿ ಪ್ರಕಾರ, ಕಳೆದ 16 ತಿಂಗಳುಗಳಿಂದ ಆಪಾದಿತರು ತಮ್ಮ ಸಂಪರ್ಕದಲ್ಲಿದ್ದು, ಹಲವು ಬಾರಿ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದಾರೆ. 2021ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಅನಿಕ್ಷಾ ಭೇಟಿಯಾಗಿದ್ದಳು ಎಂದು ಅಮೃತಾ, ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನಿಕ್ಷಾ ತನಗೆ ತಾಯಿ ಇಲ್ಲ. ತನ್ನ ಕುಟುಂಬದ ಹಣಕಾಸು ಸ್ಥಿತಿ ತಾನೇ ನಿಭಾಯಿಸಬೇಕೆಂದು ಹೇಳಿ ನಂಬಿಸಿ, ವಿಶ್ವಾಸ ಗಿಟ್ಟಿಸಿದ ನಂತರ ಕೆಲವು ಬುಕ್ಕಿಗಳ ಬಗ್ಗೆ ಮಾಹಿತಿ ಒದಗಿಸಲು ಮುಂದಾದಳು. ಇದರ ಮೂಲಕ ಹಣ ಸಂಪಾದಿಸಬಹುದೆಂದು ಹೇಳಿದಳು. ಆಗ ಕ್ರಿಮಿನಲ್ ಅಪರಾಧ ಪ್ರಕರಣದಲ್ಲಿ ಸಿಲುಕಿರುವ ತನ್ನ ತಂದೆಯನ್ನು ಪಾರು ಮಾಡಲು ₹1 ಕೋಟಿ ಲಂಚದ ಆಮಿಷವೊಡ್ಡಿದಳು. ಇದರಿಂದ ಅಸಮಾಧಾನಗೊಂಡು ಆಕೆಯ ಮೊಬೈಲ್ ಕರೆ ನಿರ್ಬಂಧಿಸಿದ್ದಾಗಿ ಅಮೃತಾ ಅವರು ಹೇಳಿಕೆ ನೀಡಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನಿಕ್ಷಾ ಅವರ ಮೊಬೈಲ್ ಸಂಖ್ಯೆಯನ್ನು ಅಮೃತಾ ನಿರ್ಬಂಧಿಸಿದ ನಂತರ, ಅಮೃತಾ ಅವರ ವಿಡಿಯೊ ತುಣುಕುಗಳು, ಆಡಿಯೊ ತುಣುಕುಗಳು ಮತ್ತು ಅನೇಕ ಸಂದೇಶಗಳನ್ನು ಅಪರಿಚಿತ ಸಂಖ್ಯೆಯಿಂದ ಕಳುಹಿಸಿದ್ದಾರೆ. ಅಲ್ಲದೆ, ಅನಿಕ್ಷಾ ಮತ್ತು ಆಕೆಯ ತಂದೆ ಅಮೃತಾ ಅವರಿಗೆ ಪರೋಕ್ಷ ಬೆದರಿಕೆ ಹಾಕಿ, ಅವರ ವಿರುದ್ಧ ಸಂಚು ಮಾಡಿರುವ ಆರೋಪ ಎಫ್‌ಐಆರ್‌ನಲ್ಲಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.