ADVERTISEMENT

ಅಖಿಲೇಶ್‌ ಬಗ್ಗೆ ಮಾನಹಾನಿ ಪೋಸ್ಟ್: ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಎಫ್‌ಐಆರ್‌!

ಐಎಎನ್ಎಸ್
Published 1 ಡಿಸೆಂಬರ್ 2021, 10:26 IST
Last Updated 1 ಡಿಸೆಂಬರ್ 2021, 10:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ಮಾನಹಾನಿ ಪೋಸ್ಟ್‌ ಮಾಡಿದ ಆರೋಪಕ್ಕೆ ಸಂಬಂಧಿಸಿ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಘಟನೆ ನಡೆದಿದೆ.

ಹಾಗೆಂದು ಅಖಿಲೇಶ್‌ ವಿರುದ್ಧ ಸ್ವತಃ ಮಾರ್ಕ್‌ ಜುಕರ್‌ಬರ್ಗ್‌ ಯಾವುದೇ ಪೋಸ್ಟ್‌ ಮಾಡಿಲ್ಲ. ಜುಕರ್‌ಬರ್ಗ್‌ ಅವರ ಸಾಮಾಜಿಕ ತಾಣ ಫೇಸ್‌ಬುಕ್‌ಅನ್ನು ಬಳಸಿಕೊಂಡು ಮಾನಹಾನಿಯಾಗುವಂತಹ ಪೋಸ್ಟ್‌ ಮತ್ತು ಕಾಮೆಂಟ್‌ಗಳನ್ನು ಮಾಡಿರುವ ಆರೋಪಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಮಾರ್ಕ್‌ ಜುಕರ್‌ಬರ್ಗ್‌ ಸೇರಿದಂತೆ 50 ಮಂದಿ ಮೇಲೆ ಉತ್ತರ ಪ್ರದೇಶದ ಕೌನಜ್‌ ಜಿಲ್ಲೆಯ ಸ್ಥಳೀಯ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿದೆ.

ADVERTISEMENT

ಕನೌಜ್‌ ಜಿಲ್ಲೆಯ ಸರಹತಿ ಗ್ರಾಮದ ನಿವಾಸಿ ಅಮಿತ್‌ ಕುಮಾರ್‌ ಎಂಬುವವರು ಜುಕರ್‌ಬರ್ಗ್‌ ಮತ್ತು ಇತರ 49 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. 'ಬುವಾ ಬಬುವಾ' ಎಂಬ ಫೇಸ್‌ಬುಕ್‌ ಪುಟದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಅವರ ವರ್ಚಸ್ಸಿಗೆ ಧಕ್ಕೆ ತರುವಂತಹ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಮೇ 25ರಂದು ಪೊಲೀಸ್‌ ವರಿಷ್ಠಾಧಿಕಾರಿಗೆ ಅಮಿತ್‌ ಕುಮಾರ್‌ ದೂರು ಸಲ್ಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಕೋರ್ಟ್‌ ಮೊರೆ ಹೋಗಿದ್ದರು. ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್‌ ಸೇರಿದಂತೆ ಫೇಸ್‌ಬುಕ್‌ ಪೇಜ್‌ ಅಡ್ಮಿನ್‌ ವಿರುದ್ಧ ಕ್ರಮ ಕೈಗೊಳ್ಳವಂತೆ ಕೋರಿದ್ದರು.

ಅಮಿತ್‌ ಕುಮಾರ್‌ ಅವರ ದೂರನ್ನು ಅನ್ವಯಿಸಿ ಎಫ್‌ಐಆರ್‌ ದಾಖಲಿಸುವಂತೆ ಮುಖ್ಯ ಮ್ಯಾಜಿಸ್ಟ್ರೇಟ್‌ ಧರ್ಮವೀರ್‌ ಸಿಂಗ್‌ ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ತನಿಖೆಯ ಸಂದರ್ಭ ಜುಕರ್‌ಬರ್ಗ್‌ ಅವರ ಹೆಸರನ್ನು ಕೈಬಿಡಲಾಗಿದೆ. ಫೇಸ್‌ಬುಕ್‌ ಪೇಜ್‌ನ ಸದಸ್ಯರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.