ನವದೆಹಲಿ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಧ್ಯಪ್ರದೇಶದ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಹಿಂದೂ ದೇವತೆ ಕಾಳಿ ಮಾತೆಗೆ ಸಂಬಂಧಿಸಿದಂತೆ ಮಹುವಾ ಮೊಯಿತ್ರಾ ಮಂಗಳವಾರ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು.
'ನನಗೆ ಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ. ನಿಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ' ಎಂದು ಹೇಳಿದ್ದರು.
ಮಹುವಾ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಹುವಾ ಬಂಧನಕ್ಕೆ ಬೇಡಿಕೆಯನ್ನಿರಿಸಿದೆ.
ಆದರೆ ಈ ವಿಷಯದಲ್ಲಿ ಟಿಎಂಸಿ ಪಕ್ಷವು ಯಾವುದೇ ಪ್ರತ್ರಿಕ್ರಿಯೆ ನೀಡದೆ ಅಂತರವನ್ನು ಕಾಯ್ದುಕೊಂಡಿದೆ.
ಮಹುವಾ ಮೊಯಿತ್ರಾ ವಿರುದ್ದ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಚಕ್ರವರ್ತಿ ಅವರು ಕೋಲ್ಕತ್ತದ ಬೌಬಜಾರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ಈ ಕುರಿತು ಬುಧವಾರ ಮತ್ತೆ ಟ್ವೀಟಿಸಿರುವ ಮಹುವಾ, 'ನಾನು ಕಾಳಿ ಆರಾಧಕಿ. ಯಾವುದಕ್ಕೂ ಹೆದರುವುದಿಲ್ಲ. ನಿಮ್ಮ ಮೂಢತೆ, ಗೂಂಡಾ, ಪೊಲೀಸ್ ಅಥವಾ ಟ್ರೋಲ್‌ಗಳಿಗೆ ಬಗ್ಗುವುದಿಲ್ಲ. ಸತ್ಯಕ್ಕೆ ಬೆಂಬಲ ಪಡೆಗಳ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.