ADVERTISEMENT

ಮುಂಬೈ | ಬುದ್ಧನ ವಿರುದ್ಧ ಅವಹೇಳನ; ಸಂಭಾಜಿ ಭಿಡೆ ವಿರುದ್ಧ ಮತ್ತೊಂದು ಎಫ್‌ಐಆರ್‌

ಪಿಟಿಐ
Published 7 ಆಗಸ್ಟ್ 2023, 12:28 IST
Last Updated 7 ಆಗಸ್ಟ್ 2023, 12:28 IST
ಸಂಭಾಜಿ ಭಿಡೆ
ಸಂಭಾಜಿ ಭಿಡೆ   

ಥಾಣೆ: ಮಹಾತ್ಮ ಗಾಂಧಿ, ಶಿರಡಿ ಸಾಯಿಬಾಬಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿಚಾರಣೆ ಎದುರಿಸುತ್ತಿರುವ ಬಲಪಂಥೀಯ ನಾಯಕ ಸಂಭಾಜಿ ಭಿಡೆ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.

ಗೌತಮ ಬುದ್ಧ, ಪೆರಿಯಾರ್ ವಿರುದ್ಧ ಹೇಳಿಕೆ ನೀಡಿದ ಸಂಬಂಧ ನವ ಮುಂಬೈ ಠಾಣೆಯಲ್ಲಿ ಭಿಡೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಗೌತಮ್‌ ಬುದ್ಧ, ಜ್ಯೋತಿ ಬಾ‍ ಫುಲೆ, ಪೆರಿಯಾರ್‌ ವಿರುದ್ಧ ಭಿಡೆ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದು, ಈ ಹೇಳಿಕೆಗಳು ಅವರ ಅನುಯಾಯಿಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ನವ ಮುಂಬೈನ ಪನ್ವೇಲ್‌ ನಿವಾಸಿ ವಕೀಲ ಅಮಿತ್ ಕತರ್ನಾವ್ರೆ ಎಂಬುವವರು ದೂರು ನೀಡಿದ್ದರು. ದೂರಿನ ಕುರಿತು ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಭಿಡೆ ವಿರುದ್ಧ ಐಪಿಸಿ ಸೆಕ್ಷನ್ 153-ಎ (ಧರ್ಮ, ಜನಾಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153- ಬಿ(ರಾಷ್ಟ್ರೀಯ ಏಕೀಕರಣದ ವಿರುದ್ಧ ಪೂರ್ವಾಗ್ರಹ ಪೀಡಿತ ಆರೋಪಗಳು, ಸಮರ್ಥನೆಗಳು) ಮತ್ತು 295-ಎ(ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದ್ದಾರೆ.

‘ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲೂ ಎಫ್‌ಐಆರ್‌ ದಾಖಲಾಗಿದೆ’ ಎಂದು ಹೇಳಿದರು.

ಶಿರಡಿ ಸಾಯಿಬಾಬಾ ಮತ್ತು ಸಮಾಜ ಸುಧಾರಕ ಜ್ಯೋತಿ ಬಾ ಫುಲೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 1ರಂದು ಭಿಡೆ ವಿರುದ್ಧ ನಾಸಿಕ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಮಹಾತ್ಮ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಅಮರಾವತಿಯಲ್ಲಿಯೂ (ಜುಲೈ 29) ಎಫ್‌ಐಆರ್‌ ದಾಖಲಾಗಿತ್ತು.

ಓದಿ : ಶಿರಡಿ ಸಾಯಿಬಾಬಾ ವಿರುದ್ಧ ಹೇಳಿಕೆ: ಸಂಭಾಜಿ ಭಿಡೆ ವಿರುದ್ಧ ಮತ್ತೆ ಎಫ್‌ಐಆರ್‌

ಓದಿ : ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಸಂಭಾಜಿ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.