ADVERTISEMENT

ನೂಪುರ್‌ ಪ್ರಕರಣ: ಟಿ.ವಿ ಪತ್ರಕರ್ತೆ ವಿರುದ್ಧವೂ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 15:51 IST
Last Updated 14 ಜೂನ್ 2022, 15:51 IST
ನೂಪುರ್‌ ಶರ್ಮಾ
ನೂಪುರ್‌ ಶರ್ಮಾ   

ಮುಂಬೈ : ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ಟಿ.ವಿ ಪತ್ರಕರ್ತೆ ನಾವಿಕಾ ಕುಮಾರ್ ಹೆಸರು ಇದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ ಎಂದುನೂಪುರ್‌ ಶರ್ಮಾ ಮತ್ತು ನಾವಿಕಾ ಕುಮಾರ್ ವಿರುದ್ಧ ಮುಸ್ಲಿಂ ಧರ್ಮಗುರುಗಳು ಸೋಮವಾರ ನೀಡಿದ ದೂರಿನ ಮೇರೆಗೆ ನನಲ್‌ಪೇಟ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಟೈಮ್ಸ್ ನೌ ನವಭಾರತ್‌’ನ ಪ್ರಧಾನ ಸಂಪಾದಕಿ ಮತ್ತು ‘ಟೈಮ್ಸ್ ನೆಟ್‌ವರ್ಕ್‌ ಗ್ರೂಪ್’ ಸಂಪಾದಕಿ ನಾವಿಕಾ ಕುಮಾರ್ ಅವರು ನಡೆಸಿಕೊಟ್ಟ, ‘ಟೈಮ್ಸ್ ನೌ’ ಪ್ರಸಾರ ಮಾಡಿದ ‘ಪ್ರೈಮ್ ಟೈಮ್’ ಸುದ್ದಿ ಕಾರ್ಯಕ್ರಮದಲ್ಲಿ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು ಎನ್ನಲಾಗಿದೆ.

ADVERTISEMENT

ಆ ದಿನದ ‘ಟೈಮ್ಸ್ ನೌ’ ಸುದ್ದಿ ನಿರೂಪಕಿಯಾಗಿದ್ದ ನಾವಿಕಾ ಕುಮಾರ್ ಮತ್ತು ಚರ್ಚೆಯಲ್ಲಿ ಭಾಗವಹಿಸಿದ್ದ ನೂಪುರ್ ಶರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿ, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದುಪೊಲೀಸರು ಅಧಿಕಾರಿ ತಿಳಿಸಿದರು.

ಪ್ರವಾದಿ ಮಹಮ್ಮದ್‌ರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ನೂಪುರ್‌ ವಿರುದ್ಧ ದೇಶದಲ್ಲಿ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು,ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ನೂಪುರ್‌ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.