ಮುಂಬೈ: ಮಾದಕವಸ್ತು ನಿಗ್ರಹ ಸಂಸ್ಥೆಯ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಸುಳ್ಳು ಮಾಹಿತಿ ಒದಗಿಸಿ ಬಾರ್ ಲೈಸನ್ಸ್ ಪಡೆದ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ಥಾಣೆ ಜಿಲ್ಲೆಯ ಕೊಪ್ರಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮೀರ್ ವಾಂಖೆಡೆ ಅವರು ಸದ್ಗುರು ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಮಾಲೀಕರಾಗಿದ್ದಾರೆ. ಅವರು 1997ರ ಅ.29ರಂದು ಬಾರ್ ಲೈಸನ್ಸ್ ಪಡೆದಿದ್ದರು. ಆದರೆ, ತಮ್ಮ ಜನ್ಮ ದಿನಾಂಕದ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿ ಒದಗಿಸಿದ್ದಾರೆ ಎನ್ನಲಾಗಿದೆ.
ದಾಖಲೆಗಳ ಪ್ರಕಾರ ವಾಂಖೆಡೆ ಅವರು ಲೈಸನ್ಸ್ ಪಡೆದಾಗ ಅವರಿಗೆ 17 ವರ್ಷ, ಹನ್ನೊಂದು ತಿಂಗಳು ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಮೀರ್ ವಾಂಖೆಡೆ ಅವರು ಸುಳ್ಳು ಮಾಹಿತಿ ನೀಡಿ ಬಾರ್ ಲೈಸನ್ಸ್ ಪಡೆದಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು 2021ರ ನವೆಂಬರ್‌ನಲ್ಲಿ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.