ಮುಂಬೈ: ದಕ್ಷಿಣ ಮುಂಬೈನಲ್ಲಿರುವ ಉದ್ಯಮಿ ಮುಖೇಶ್ ಅಂಬಾನಿ ಅವರ ಐಷಾರಾಮಿ ನಿವಾಸ‘ಅಂಟಿಲಿಯಾ‘ ಸಮೀಪ ಗುರುವಾರ ಪತ್ತೆಯಾದ ಸ್ಫೋಟಕ ವಸ್ತು ತುಂಬಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವಾಹನದಲ್ಲಿ ಜಿಲೆಟಿನ್ ಕಡ್ಡಿಗಳಿದ್ದು, ವಾಹನದ ನಂಬರ್ ಪ್ಲೇಟ್ (ನೋಂದಣಿ ಸಂಖ್ಯೆ) ನಕಲಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಗಾಂದೇವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಾಹನದ ನಂಬರ್ ಪ್ಲೇಟ್‌ನಲ್ಲಿನ ನೋಂದಣಿ ಸಂಖ್ಯೆಯು ಅಂಬಾನಿಯವರ ಭದ್ರತಾ ಪಟ್ಟಿಯ ವಿವರದಲ್ಲಿರುವ ಎಸ್‌ಯುವಿ ವಾಹನದ ಸಂಖ್ಯೆಯನ್ನು ಹೋಲುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಪ್ತಿ ಮಾಡಿದ ವಾಹನದಲ್ಲಿ ಒಂದು ಪತ್ರ ಕೂಡ ಸಿಕ್ಕಿದ್ದು, ಆ ಪತ್ರದಲ್ಲಿರುವ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
‘ಜಪ್ತಿ ಮಾಡಿದ ಸ್ಕಾರ್ಪಿಯೊ ವ್ಯಾನ್‌ನಲ್ಲಿ 20 ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಈ ಸಂಬಂಧ ಮುಂಬೈ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‘ ಎಂದು ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್‌ಮುಖ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.