ಪಟ್ನಾ: ಪುಲ್ವಾಮ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಕಳೆದುಕೊಂಡಿದ್ದೇವೆ.ದೇಶದ ಜನರೊಂದಿಗೆ ನಾನಿದ್ದೇನೆ.ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಬಿಹಾರದ ಬೆಹಾಸುರೈ ಎಂಬಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮೋದಿ, ಹುತಾತ್ಮರಾದ ಸಂಜಯ್ ಕುಮಾರ್ ಸಿನ್ಹಾ ಮತ್ತು ರತನ್ ಕುಮರ್ ಠಾಕೂರ್ ಅವರಿಗೆ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ನಿಮ್ಮ ಮನಸ್ಸಿನಲ್ಲಿರುವ ಅದೇ ಕಿಚ್ಚು ನನ್ನೊಳಗೂ ಇದೆ ಎಂದಿದ್ದಾರೆ.
ಪುಲ್ವಾಮ ದಾಳಿಯ ರೂವಾರಿಗಳಿಗೆ ಶಿಕ್ಷೆ ನೀಡಲು ಸೇನೆಗೆ ಸರ್ವಾಧಿಕಾರ ನೀಡಿರುವುದಾಗಿ ಎರಡು ದಿನಗಳ ಹಿಂದೆ ಮೋದಿ ಹೇಳಿದ್ದರು.
ಬಿಹಾರದಲ್ಲಿ ಪಟ್ನಾ ಮೆಟ್ರೊ ರೈಲು ಸೇರಿದಂತೆ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ಇಲ್ಲಿನ ಅಭಿವೃದ್ಧಿಯಿಂದಾಗಿ ಜನ ಜೀವನ ಸುಗಮವಾಗಲಿದೆ ಎಂದಿದ್ದಾರೆ.
ಪಟ್ನಾ ಮೆಟ್ರೊ ರೈಲು ಯೋಜನೆ ₹13,365.77 ಕೋಟಿಯದ್ದಾಗಿದೆ.31.39 ಕಿಮೀ ಉದ್ದದ ರೈಲು ದಾರಿ ಇದಾಗಿದ್ದು, 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.